ಅನುದಿನ‌ ಕವನ-೩೬೮, ಕವಿ: ಮನು ಪುರ, ತುಮಕೂರು, ಕವನದ ಶೀರ್ಷಿಕೆ: ಅಕ್ಷರದವ್ವ

ಅಕ್ಷರದವ್ವ

ಬದುಕಿದರು ವಿದ್ಯೆಗೆ ನೆರಳಾಗಿ
ಬಹುಜನರ ಬದುಕಿಗೆ ಬೆಳಕಾಗಿ

ಅಕ್ಷರದೀಪ ಹಿಡಿದು
ಅಂಧಕಾರವ ಕಳೆದು
ಜ್ಞಾನಮಾರ್ಗದಿ ನಡೆದು
ಮನುವಾದವ ತುಳಿದು
ಸ್ವಾಭಿಮಾನದಿ ಉಳಿದು ;
ಬದುಕಿದರು ವಿದ್ಯೆಗೆ ನೆರಳಾಗಿ…
ಬಹುಜನರ ಬದುಕಿಗೆ ಬೆಳಕಾಗಿ…

ಸಗಣಿ ನೀರನು ಎರಚಿದರು
ಬೆಂಕಿ ಬೈಗುಳವ ಸುರಿಸಿದರು
ಅಡ್ಡಗಟ್ಟಿ ಕಿರುಚಿದರು
ಕಲ್ಲಿನಿಂದಾ ಥಳಿಸಿದರು
ಹೆದರದೆ ನಿಂತು ಜಯಿಸಿದರು.
ಬದುಕಿದರು ವಿದ್ಯೆಗೆ ನೆರಳಾಗಿ…
ಬಹುಜನರ ಬದುಕಿಗೆ ಬೆಳಕಾಗಿ…

ಸೋಗಲಾಡಿಗಳ ಸೊಕ್ಕು ಮುರಿದು
ಜಾತಿವಾದಿಗಳ ಪಕ್ಕೆಗೊದೆದು
ಲಿಂಗಭೇದಗಳ ತಿಕ್ಕಿ ತೊಳೆದು
ಮೇಲು ಕೀಳುಗಳ ತಿಪ್ಪೆಗೆಳೆದು
ನ್ಯಾಯನೀತಿಗಳ ಗಟ್ಟಿಹಿಡಿದು
ಬದುಕಿದರು ವಿದ್ಯೆಗೆ ನೆರಳಾಗಿ…
ಬಹುಜನರ ಬದುಕಿಗೆ ಬೆಳಕಾಗಿ…

ಅಂದು ಹಚ್ಚಿದ ಅಕ್ಷರ ಜ್ಯೋತಿ
ಆರದೆ ಉರಿಯುತಿದೆ….
ಅರಿವನು ಸುರಿಯುತಿದೆ
ಅಂತಶಕ್ತಿಯ ಪೊರೆಯುತಿದೆ.
ಸ್ವಾಭಿಮಾನದ  ಶಿಕ್ಷಣ ಕ್ರಾಂತಿ
ಸರ್ವರ ಕರೆಯುತಿದೆ
ಇಂದು ಗರ್ವದಿ ನಡೆಯುತಿದೆ
ನಿಮ್ಮೀ ಪಾದಕೆ ನಮಿಸುತಿದೆ

-ಮನು ಪುರ, ತುಮಕೂರು
*****

One thought on “ಅನುದಿನ‌ ಕವನ-೩೬೮, ಕವಿ: ಮನು ಪುರ, ತುಮಕೂರು, ಕವನದ ಶೀರ್ಷಿಕೆ: ಅಕ್ಷರದವ್ವ

Comments are closed.