ಅನುದಿನ‌ ಕವನ-೩೬೯, ಕವಿ: ಡಾ. ಸದಾಶಿವ ದೊಡಮನಿ, ಇಳಕಲ್ ಕವನದ ಶೀರ್ಷಿಕೆ: ಹಾಡಲೇನು ಉಳಿದಿದೆ (ಭಾವಗೀತೆ)

ಹಾಡಲೇನು ಉಳಿದಿದೆ

ಹಾಡಲೇನು ಉಳಿದಿದೆ
ಎದೆ ನೋವೇ ಉಂಡು ಮಲಗಿದೆ
ಮುಡಿಯಲೇನು ಉಳಿದಿದೆ
ನೋವೇ ಅರಳಿ ನಗುತಿದೆ

ಬೆರಳಿಗಂಟಿದ ನೋವು
ಕೊಳಲ ಕೊರಳ ಬಳಸಿದೆ
ಹೇಗೆ ನುಡಿಸಿದರೂ ಕೊಳಲು
ಬರೀ ನೋವೇ ನುಡಿಯುತಿದೆ

ತುಟಿಯ ಮೇಲಿನ ನಗು
ಎಂದೋ ಬಾಡಿ ಹೋಗಿದೆ
ಬೀದಿ ಸುತ್ತುವ ಹೈದ
ಹಸಿವೆ ಹೆತ್ತು ಅಳುತಿದೆ

ಅಳುವ ದನಿಯು ಕೇಳಿ
ಕವಿಯ ಮನವು ನೊಂದಿದೆ
ಹಸಿದ ಕರುಳ ತಣಿಸಲೆಂದು
ಕರೆಯ ಅರಸಿ ಹೊರಟಿದೆ

-ಡಾ. ಸದಾಶಿವ ದೊಡಮನಿ, ಇಳಕಲ್
*****