ಅನುದಿನ ಕವನ-೩೭೦, ಕವಿ: ಎ.ಎನ್. ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಒಲವ ಧಾರೆ…!

ಹಿರಿಯ ಕವಿ ಎ.ಎನ್.ರಮೇಶ್. ಗುಬ್ಬಿ ಅವರು
ಹೊಸವರ್ಷದ ಸಂಭ್ರಮದಲ್ಲಿ‌ ರಚಿಸಿರುವ ಪ್ರಥಮ ಪ್ರೇಮಕವಿತೆ ಒಲವಧಾರೆ..!
ಸುಮಧುರ ಸಂವೇದನೆಗಳ ಸುಂದರ ಭಾವಗೀತೆ ಇದು. ಅವಳೆಂದರೆ ಪ್ರತಿ ಕವಿಯ ಕನಸು ಕಲ್ಪನೆಗಳ ಕಾವ್ಯಕನ್ನಿಕೆಯೂ ಹೌದು. ಓದುವ ಪ್ರತಿ ಮನಸು ಹೃದಯದಂಗಳಗಳ ಬೆಳದಿಂಗಳ ಬಾಲಿಕೆಯೂ ಹೌದು ಅಂತಾರೆ ಕವಿ ಎ.ಎನ್.ರಮೇಶ್. ಗುಬ್ಬಿ ಅವರು….👇

💚ಒಲವಧಾರೆ..!

ನಿತ್ಯ ಎದೆಯಂಗಳಕೆ ಸ್ಫುರಿವ
ಅಪೂರ್ವ ಒಲವಧಾರೆ ಅವಳು
ಸದಾ ಮನದಂಗಳದಿ ಹೊಳೆವ
ಅನನ್ಯ ಚೆಲುವತಾರೆ ಅವಳು.!

ಹೃದಯ ರಿಂಗಣ ಪುಳಕಿಸುವ
ಸೊಬಗಿನ ನಲಿವನೀರೆ ಅವಳು
ಧಮನಿ ಧಮನಿಯಲಿ ಹರಿವ
ಸ್ಫೂರ್ತಿ ಚೈತನ್ಯತೊರೆ ಅವಳು.!

ದೀಪ ಅವಳು ದೇದೀಪ್ಯ ಅವಳು
ರೂಪ ಅವಳು ಅಪರೂಪ ಅವಳು
ಸುಮ ಅವಳು ಅನುಪಮ ಅವಳು
ರಾಗ ಅವಳು ಅನುರಾಗ ಅವಳು.!

ಗೀತ ಅವಳು ಸಂಗೀತ ಅವಳು
ನಾದ ಅವಳು ನಿನಾದ ಅವಳು
ಭಾಗ್ಯ ಅವಳು ಸೌಭಾಗ್ಯ ಅವಳು
ಬೆಳಕು ಅವಳು ಬೆಳದಿಂಗಳವಳು.!

ಜಗದ ಸೆಳವು ಹೊಳಹು ಚೆಲುವವಳು
ಜೀವದ ಅರಿವು ಹರಿವು ಒಲವವಳು
ಭಾವದ ನಲಿವು ಗೆಲುವು ಬಲವವಳು
ಬಾಳಿನ ಸ್ವರವು ಸ್ತರವು ವರವವಳು.!

-ಎ.ಎನ್.ರಮೇಶ್. ಗುಬ್ಬಿ.
*****