ಬೆಳಗುಶ್ರೀ ಎಸ್. ನೆಲ್ಲಿಕಟ್ಟೆ ಅವರ ‘ಕಾವ್ಯದ ಕನವರಿಕೆ’ ಕವನ ಸಂಕಲನ ಬಿಡುಗಡೆ.

ಚಿತ್ರದುರ್ಗ, ಜ.6: ತಾಲೂಕಿನ ಭರಮಸಾಗರ ಹೋಬಳಿ ನೆಲ್ಲಿಕಟ್ಟೆ ಗ್ರಾಮದ ಮಾರಕ್ಕ ಮಾತೆ ಮೊಮ್ಮಗಳು ಬೆಳಗುಶ್ರೀ ಎಸ್. ನೆಲ್ಲಿಕಟ್ಟೆ ಅವರ ಚೊಚ್ಚಲ ಕೃತಿ ಕಾವ್ಯದ ಕನವರಿಕೆ ಕವನ ಸಂಕಲನ ಜ.7ರಂದು ಬೆಳಗ್ಗೆ 11ಗಂಟೆಗೆ ಯುವ ಬರಹಗಾರರ ಚೊಚ್ಚಲು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಗಲಿದೆ.
ಬೆಂಗಳೂರಿನ ಕನ್ನಡಭವನದ ನಯನ ರಂಗಮಂದಿರದಲ್ಲಿ ಖ್ಯಾತ ಸಾಹಿತಿ ಪ್ರೊ.ಹಂಪನಾಗರಾಜಯ್ಯ ಅವರು ಕೃತಿಗಳನ್ನು ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಅವರು ಭಾಗವಹಿಸುವರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎಂ.ಎನ್. ನಂದೀಶ್ ಹಂಜೆ ಅವರ ಅಧ್ಯಕ್ಷತೆ ವಹಿಸುವರು. ವೈದ್ಯಕೀಯ ಶಿಕ್ಷಣದ ಬಿ.ಎಚ್.ಎಂ.ಎಸ್. ಅಧ್ಯಯನ ಮಾಡುತ್ತಿರುವ ಬೆಳಗುಶ್ರೀ ಎಸ್ ನೆಲ್ಲಿಕಟ್ಟೆ ಈಗಾಗಲೇ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವರು. ಭದ್ರಾವತಿ ಆಕಾಶವಾಣಿಯಿಂದ ಇವರ ಕವಿತೆಗಳು ಪ್ರಸಾರವಾಗಿವೆ. ಪತ್ರಿಕೆಗಳಲ್ಲಿ ಕವನ, ಲೇಖನ, ಕತೆಗಳು ಪ್ರಕಟವಾಗಿವೆ.


*****