ಅನುದಿನ‌ ಕವನ-೩೭೨, ಯುವ ಕವಯತ್ರಿ: ಬೆಳಗುಶ್ರೀ ಎಸ್. ನೆಲ್ಲಿಕಟ್ಟೆ, ಶಂಕರಘಟ್ಟ, ಕವನದ ಶೀರ್ಷಿಕೆ: ಅಪ್ಪ ನೀ ನಿಜಕ್ಕೂ ತುಪ್ಪದ ದೀಪ

ಅಪ್ಪ ನೀ ನಿಜಕ್ಕೂ ತುಪ್ಪದ ದೀಪ

ಅಪ್ಪ ಹಾಲಾಗಿ ಕಾದು
ಹೆಪ್ಪಿನಲ್ಲಿ ಮೊಸರಾದೆ!
ಮಥಿಸಿದ ಮೊಸರಲ್ಲಿ ಮಜ್ಜಿಗೆಯಾದೆ
ಮಥನದ ಮಜ್ಜಿಗೆಯಲ್ಲಿ ಬೆಣ್ಣೆಯಾದೆ !
ಬೆಣ್ಣೆಯೊಳಗೆ ತುಪ್ಪವಾಗಿ
ತುಪ್ಪದೊಳಗಿನ ಜ್ಯೋತಿಯಾಗಿ ಬೆಳಗಿದೆ!!

ಅಂದು ಮೊದಲ ಸಲ…
ನಾ ಅಪ್ಪ ಎಂದು ತೊದಲ್ನುಡಿದಾಗ
ಬದುಕ ತೊಡಕುಗಳನ್ನೆಲ್ಲಾ ತಳ್ಳಿಹಾಕಿ
ಸಾರ್ಥಕತೆಯ ಸಾರವನ್ನು ಮೆಲಕು ಹಾಕಿ
ಜಗದ ಜಂಜಾಟಗಳನ್ನೆಲ್ಲ ಮರೆತು
ಸಂತಸವ ಕಣ್ಣಂಚಿನಲ್ಲಿ ಹೊತ್ತು
ಚುಚ್ಚು ಮೀಸೆಯಲಿ ಮಹದಾನಂದದಿ ಮುತ್ತಿಟ್ಟ ಅಪ್ಪ ನಿಜಕ್ಕೂ ನೀ ತುಪ್ಪದ ದೀಪ!

ಚಂಡಿ ಚಾಮುಂಡಿಯಾಗಿ ಹಠ ಮಾಡಿದಾಗ
ಕೂಸುಮರಿ ಕೂಸುಮರಿ ಎಂದು ಹೆಗಲೇರಿಸಿಕೊಂಡು ಬಾನಂಗಳದಿ ಬೆಳದಿಂಗಳ ತೋರಿಸುತ್ತಾ
ಮುತ್ತು ಕೊಡುತ್ತಾ ಕೈತುತ್ತು ನೀಡಿ ಬೆಳೆಸಿದ ಅಪ್ಪ ನಿಜಕ್ಕೂ ನೀ ತುಪ್ಪದ ದೀಪ !

ತರ್ಲೆ ಮಾಡಿ ಒದರುವಾಗ
ಸಹನೆಯಲ್ಲೆ ನೀತಿ ನಿಯತ್ತು ಬೋಧಿಸಿ
ಎಲ್ಲರೊಳಗೆ ಬೆರೆತು ಬಾಳುವುದು ಕಲಿಸಿ
ಅಕ್ಷರದ ಅಕ್ಕರೆಯ ಧಾರೆ ಎರೆದು
ದುರಂತದ ದುರ್ಗುಣಗಳ ತೊರೆದು
ಬಾಳ ಪಾಠ ಕಲಿಸಿದ ಅಪ್ಪ
ನಿಜಕ್ಕೂ ನೀ ತುಪ್ಪದ ದೀಪ!!

ಸಣ್ಣಪುಟ್ಟ ಗೆಲುವಿಗೆ ಬೆನ್ನು ತಟ್ಟಿ
ನಿಲ್ಲು ಮಗು ನಿಲ್ಲು ಸಂಕಷ್ಟಗಳ ಮೆಟ್ಟಿ
ನನ್ನ ಕಂದ ನೀ ನೀಡುವೆ ಬಹು ಆನಂದ
ಕಾಡಿಸುವ ಕತ್ತಲು ಓಡಿಸುವ ಬೆಳಕಾಗಿ ಬೆಳಗು
ದ್ವೇಷ ಅಸೂಯೆಗಳಿಂದ ಬಹುದೂರ ತೊಲಗು
ಎಂದೆಲ್ಲ ಹೇಳಿದ ಅಪ್ಪಾ
ನಿಜಕ್ಕೂ ನೀ ತುಪ್ಪದ ದೀಪ!!

ಜೀವನದ ಗುರಿಯ ತೋರಿಸುವ ಗುರುವಾಗಿ
ಅರಿವನ್ನು ಬಿತ್ತಿ ಬೆಳೆಯುವ ಕೃಷಿಕನಾಗಿ
ಮಮತೆಯ ಒಡಲಿನ ಕಡಲಾಗಿ
ಕಣ್ಣೋಳಗೆ ಕರುಣೆಯ ಬಿತ್ತುವ ಕರುಣಾಸಾಗರ ನಾಲಿಗೆಯ ಮೇಲೆ ನಾದಾಮೃತ ತುಂಬುವ ಸಂಗೀತಗಾರ
ಸಾಧನೆಯ ಹಾದಿಯಲ್ಲಿ ಬೀಳದಂತೆ ಜಾರಿ
ವೇದನೆಯಲ್ಲಿ ಕಳೆದುಹೋಗದಂತೆ ಸಿರಿ
ಬೆಳಗು ಬೆಳಕಾಗಲೆಂದು ಹಾರೈಸುವ ಅಪ್ಪ
ನಿಜಕ್ಕೂ ನೀ ತುಪ್ಪದ ದೀಪ!!

-ಬೆಳಗುಶ್ರೀ ಎಸ್. ನೆಲ್ಲಿಕಟ್ಟೆ
ವೈದ್ಯಕೀಯ ವಿದ್ಯಾರ್ಥಿನಿ,
ಅಜಾತ ನಿಲಯ,
ಗ್ರಾಮ ಪಂಚಾಯಿತಿ ಕಚೇರಿ ರಸ್ತೆ
ಶಂಕರಘಟ್ಟ, ಭದ್ರಾವತಿ:ತಾ.
ಶಿವಮೊಗ್ಗ ಜಿಲ್ಲೆ:577451.
*****