ಬೆಂಗಳೂರು, ಜ.8: ಪ್ರಸ್ತುತ ಆಧುನಿಕ ತಂತ್ರಜ್ಞಾನ ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು, ಪ್ರತಿಭೆಗೆ ಪ್ರೇರಕ ಶಕ್ತಿಯಾಗಿ ಇದನ್ನು ಬಳಸಿಕೊಳ್ಳಬೇಕಿದೆ ಎಂದು ಖ್ಯಾತ ಹಿರಿಯ ಸಾಹಿತಿ ಹಂಪನಾ ಅವರು ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಶುಕ್ರವಾರ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿನಾಡಿನ ಐವತ್ತೈದು ಯುವ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತಾಡಿದರು.
ಆಧುನಿಕ ತಂತ್ರಜ್ಞಾನದಿಂದ ಹೊರಬರಲು ಸಾಧ್ಯವಿಲ್ಲ. ಹಾಗಾಗಿ ಆ ತಂತ್ರಜ್ಞಾನವನ್ನು ನಮ್ಮ ಸೃಜನಶೀಲತೆ, ಪ್ರತಿಭೆಯ ಸಂವರ್ಧನೆಗೆ ಬಳಸಿಕೊಳ್ಳುವ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಬೆಳೆಸೋಣ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಮಾತನಾಡಿ ಸಾಹಿತ್ಯ ಸಮಾಜ ಸುಧಾರಣೆಯ ಸಾಧನವಾಗಿದೆ ಎಂದರು.
ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್. ನಂದೀಶ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಕಿರಣ್ ಸಿಂಗ್ ಸ್ವಾಗತಿಸಿ, ವಂದಿಸಿದರು.
55ಯುವ ಲೇಖಕರಲ್ಲಿ ಚಿತ್ರದುರ್ಗ ತಾಲ್ಲೂಕು ಭರಮಸಾಗರ ಹೋಬಳಿ ನೆಲ್ಲಿಕಟ್ಟೆ ಗ್ರಾಮದ ಬೆಳಗುಶ್ರೀ ಎಸ್ ನೆಲ್ಲಿಕಟ್ಟೆ ಅವರ ಚೊಚ್ಚಲ ಕೃತಿ ‘ಕಾವ್ಯದ ಕನವರಿಕೆ’ ಕವನ ಸಂಕಲನವೂ ಬಿಡುಗಡೆಯಾಯಿತು.
*****