ಬಳ್ಳಾರಿ: ಬಹುಮುಖ ಪ್ರತಿಭೆ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರು ಚಿತ್ರರಂಗದಲ್ಲಿದ್ದರೆ ಉತ್ತುಂಗಕ್ಕೆ ಬೆಳೆಯುತ್ತಿದ್ದರು. ಸಾಧ್ಯವಾದಲ್ಲಿ ಸಹೋದರ ಜನಾರ್ದನರೆಡ್ಡಿ ಪುತ್ರ ನಾಯಕನಟನಾಗಿ ಅಭಿನಯಿಸುವ ಚಿತ್ರದಲ್ಲಿ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಭರವಸೆ ನೀಡಿದರು.
ನಗರದ ಸಾಂಸ್ಕೃತಿಕ ಸಮುಚ್ಛಯದ ಹೊಂಗಿರಣ ಸಭಾಂಗಣದಲ್ಲಿ ಕ್ರಿಯಾಶೀಲ ಶಿಕ್ಷಕರ ವೇದಿಕೆ ಸೋಮವಾರ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತರಾತ್ರಿ ನಾಟಕದ ಶಕುನಿ ಪಾತ್ರದ ಅಭಿನಯ ಅದ್ಭುತ ಎಂದ ಅವರು, ಪುರುಷೋತ್ತಮರು ಕನ್ನಡ ಮತ್ತು ತೆಲುಗು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಬಗ್ಗೆ ನನಗೆ ಗೊತ್ತಿಲ್ಲ. ಚಿತ್ರರಂಗದಲ್ಲಿದ್ದರೆ ಜನಪ್ರಿಯರಾಗುತ್ತಿದ್ದರು. ಮುಂದಿನ ವರ್ಷ ರಾಜ್ಯ ಪ್ರಶಸ್ತಿಗೂ ಶಿಫಾರಸ್ಸು ಮಾಡುವೆ. ಅವರ ಇಬ್ಬರ ಮಕ್ಕಳ ಮದುವೆಗೂ ಸಹಕರಿಸುವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕಲ್ಯಾಣಸ್ವಾಮೀಜಿ ಆಶೀರ್ವಚನ ನೀಡಿ, ಬಳ್ಳಾರಿಯ ಮೇರು ಕಲಾವಿದೆ ದಿ. ಸುಭದ್ರಮ್ಮ ಮನ್ಸೂರ್ ಅವರು, ಪುರುಷೋತ್ತಮರನ್ನು ತನ್ನ ಮಗ ಎಂದು ಅಭಿಮಾನದಿಂದ ಹೇಳುತ್ತಿದ್ದರು. ಪುರುಷೋತ್ತಮ ಸಹ ತಾಯಿಗಿಂತಲು ಅವರನ್ನು ಹೆಚ್ಚು ಗೌರವಿಸುತ್ತಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಬಿಇಒ ಸಿದ್ದಲಿಂಗ ಮೂರ್ತಿ ಮಾತನಾಡಿದರು. ಅಭಿನಂದನೆ:ಹಂದ್ಯಾಳ್ ಪುರುಷೋತ್ತಮ ದಂಪತಿಯನ್ನು ಅಭಿನಂದಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಪುರುಷೋತ್ತಮ ಅವರು ರಕ್ತರಾತ್ರಿ ನಾಟಕದಲ್ಲಿನ ಶಕುನಿ ಮಾತ್ರಗಳನ್ನು ಹೇಳಿ ಸಭಿಕರನ್ನು ರಂಜಿಸಿದರು. ಹಾಸ್ಯಕಲಾವಿದೆ ಎರ‍್ರಿಸ್ವಾಮಿ ಹಾಸ್ಯ ಚಟಾಕಿಗಳನ್ನು ಹಾರಿಸಿದರು. ಉಮಾದೇವಿ, ಶಾರದಾ, ಎಸ್.ವಸಂತಾ, ತಿಮ್ಮಾರೆಡ್ಡಿ, ರಂಜಿತ, ಅಬ್ದುಲ್ ಜಲೀಲ್, ಎನ್.ನಾಗರಾಜ್, ವೀರಭದ್ರಾಚಾರಿ, ಆರ್.ಶಬ್ಬೀರ್ ಬಾಷಾ, ಪಿ.ನಾಗೇಶ್, ಕುಮಾರಗೌಡ, ಎಂ.ಸಿದ್ದಪ್ಪ, ರಾಮೇಶ್ವರ ಮೋಕ ಅವರಿಗೆ ರಾಧಾಕೃಷ್ಣನ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ವೀರಶೇಖರರೆಡ್ಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಾಜಿರಾವ್, ಪ್ರಧಾನ ಕಾರ್ಯದರ್ಶಿ ಜಿ.ಕೆ.ರಾಮಕೃಷ್ಣ, ಕವಿ ಎಸ್.ಮಂಜುನಾಥ್ ಇದ್ದರು.
*****