‘ಮಾಳವರು ಭಾರತದ ಮೂಲನಿವಾಸಿಗಳು’ ಮಾಳವರ ಹಳ್ಳಿ “ಮಳವಳ್ಳಿ” -ಸಂಶೋಧಕ ‘ಮನಂ’ ಪ್ರತಿಪಾದನೆ

ನಮ್ಮ ಕರ್ನಾಟಕ ನಾಡಿನ ಮಂಡ್ಯ ಜಿಲ್ಲೆಯಲ್ಲಿ ಮಳವಳ್ಳಿ ತಾಲ್ಲೂಕಿದೆ.
ಮಳವಳ್ಳಿ ಸ್ಥಳ ನಾಮ ವಿಜ್ಞಾನದ ಬಗ್ಗೆ ಹಲವು ಊಹೆಗಳಿವೆ. ಬೇರೆ-ಬೇರೆ ಪಂಡಿತರುಗಳು ನೀಡಿದ ಎರಡು ಊಹೆಗಳ ನಂತರ ಮಳವಳ್ಳಿ ಎಂಬ ಪದ ಹೇಗೆ ಹುಟ್ಟಿರಬಹುದು ಎಂಬ ವಿಷಯದ ಬಗ್ಗೆ ನನ್ನ ವಿಚಾರವನ್ನು ಮಂಡಿಸುತ್ತೇನೆ. ಕೆ.ಅನ್ನದಾನಿಯವರು ತಮ್ಮ “ಉತ್ತರದೇಸ ಕರಾಜ್ಯ” ಎಂಬ ಪುಸ್ತಕದಲ್ಲಿ ‘ಮಳವಳ್ಳಿ’ ಎಂಬ ಹೆಸರು ಮೂಡಿದ ಬಗ್ಗೆ ಈ ಕೆಳಗಿನ ಕಥೆಯನ್ನು ಬರೆದಿದ್ದಾರೆ. ಮಳವಳ್ಳಿ ಎಂಬ ಗ್ರಾಮದ ಹೆಸರು ಮತ್ತು ವೈಶಿಷ್ಟತೆ: (ಎಂ.ಸಿ. ವೀರೇಗೌಡರ ಮಾಹಿತಿಯನ್ನು ಆಧರಿಸಿ)
ಹಿಂದೆ ಮಳವಳ್ಳಿ ಎಂಬ ಊರು ಇರಲಿಲ್ಲ. ಪ್ರಾಚೀನ ಕಾಲದಿಂದಲೂ ಒಂದು ಮಾತಿದೆ ಮಳವಳ್ಳಿ ಪಕ್ಕದಲ್ಲಿ ಮಂಚನಹಳ್ಳಿ ಅಂತ, ಕೆಲವು ಒಕ್ಕಲುಗಳು ಅಲ್ಲಿ ಮಟ್ಟಿಸಿಗಿದು ಹಾಕಿಕೊಂಡು ಜೀವನ ಮಾಡುತ್ತಿದ್ದಂತೆ ಕಾಲದಲ್ಲಿ ಶ್ರೀ ಶೈಲದ ಗಂಗರಸರು ಆ ಕಡೆಯಿಂದ ಕುದುರೆಯಲ್ಲಿ ಸವಾರಿ ಬರುವಾಗ ಅವರ ಜೊತೆಯಲ್ಲಿ ಅವರ ಬೇಟೆ ನಾಯಿಯೂ ಬರುತ್ತಾ ಇರುತ್ತದೆ. ಮಂಚನಹಳ್ಳಿ ಪಕ್ಕದ ಕಾಲುದಾರಿಯಲ್ಲಿ ಹಾಯ್ದು ಬರಬೇಕಿತ್ತು. ಇವರಿಗೆ ಹೊಗೆಪಟ್ಟಿ ಸೇದುವುದಕ್ಕೆ ಬೆಂಕಿ ಬೇಕಾಗಿತ್ತು. ಅಲ್ಲಿಗೆ ಬಂದಾಗ ಮಂಚನಹಳ್ಳಿಯ ಒಂದು ಗುಡಿಸಿಲಿನಲ್ಲಿ ಅಡಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ಗುಡಿಸಿಲಿನ ಮೇಲೆ ಹೊಗೆ ಕಾಣುತ್ತದೆ. ಹೊಗೆ ಕಂಡಾಗ ಅಲ್ಲಿ ಅವರು ತಮ್ಮ ಸವಾರಿ ನಿಲ್ಲಿಸಿ ಆ ಮನೆಯಪ್ಪನನ್ನು ಕರೆದು ಸ್ವಲ್ಪ ಬೆಂಕಿ ಕೊಡಪ್ಪ ಎಂದು ಕೇಳಿ ಬೆಂಕಿ ಹಚ್ಚಿಕೊಳ್ಳುತ್ತಾರೆ. ಅರಸು ಜೊತೆಯಲ್ಲಿ ಬಂದಿದ್ದಂತ ಬೇಟೆನಾಯಿ, ಆ ಗುಡಿಸಿಲಿನ ಪಕ್ಕದಲ್ಲಿ ಕುಂಬಳ ಬಳ್ಳಿ ಬೆಳೆದು ಸೊಂಪಾಗಿ ಹಬ್ಬಿರುತ್ತದೆ, ಆ ಕುಂಬಳದ ಮೆಳೆಯನ್ನು ಮೂಸುತ್ತದೆ. ಒಂದು ಮೊಲ ಕುಂಬಳದ ಮೆಳೆಯ ಒಳಗಡೆ ಮರಿ ಹಾಕಿಕೊಂಡು ತನ್ನ ಮರಿಗೆ ರಕ್ಷಣೆ ಕೊಟ್ಟುಕೊಂಡು ಇರುತ್ತದೆ. ಈ ಮೊಲ ಸ್ವಲ್ಪ ಬಲಯುತವಾದ ಮೊಲ, ಹಾಗೆಯೇ ಈ ನಾಯಿ ತನ್ನ ಮರಿಯನ್ನು ತಿಂದು ಬಿಟ್ಟಿತ್ತೆನೋ ಎಂಬ ಭಯದಿಂದ ಮೊಲ ನಾಯಿಯ ಮೇಲೆ ಹೋರಾಟಕ್ಕೆ ಸಿದ್ಧವಾಗುತ್ತದೆ. ಸಿದ್ಧವಾದಾಗ ಮೊಲದ ಆರ್ಭಟವನ್ನು ತಾಳಲಾರದೆ ನಾಯಿಯೇ ಓಡಲು ಶುರು ಮಾಡುತ್ತದೆ. ಮೊಲ ಹಿಂದಿನಿಂದ ಅಟ್ಟಿಸಿಕೊಂಡು ಹೋಗಿ ಈಗಿನ ಮಳವಳ್ಳಿಯ ಒಕ್ಕಲುಗೇರಿಯಲ್ಲಿ ಒಂದು ಸಿದ್ದಪ್ಪಾಜಿಯ ದೇವಸ್ಥಾನ ಇದೆ, ಆ ಸ್ಥಳದಲ್ಲಿ ಬಂದು ಈ ಮೊಲವೇ ನಾಯಿಯನ್ನು ಕಟ್ಟಿ ಕೆಡುವುತ್ತದೆ. ಇದೆಲ್ಲವನ್ನು ನೋಡುತ್ತಿದ್ದ ಅರಸನಿಗೆ ಈ ಮೊಲವೇ ನಾಯಿಯನ್ನು ಕಚ್ಚಿ ಕೆಡವಿತಲ್ಲ ಎಂದು ಆಶ್ಚರ್ಯವಾಗಿ, ಇದು ಒಂದು ಗಂಡುಭೂಮಿ, ಮೊಲದಂತಹ ಸಾಧುಪ್ರಾಣಿಯು ಕೂಡ ಇಲ್ಲಿ ತನ್ನ ಪ್ರಾಣ ಮತ್ತು ಮರಿಗಳನ್ನು ರಕ್ಷಣೆ ಮಾಡಿ ಕೊಳ್ಳುವುದಕ್ಕೋಸ್ಕರ ಸ್ವಾಭಿಮಾನದಿಂದ ನಾಯಿಯ ವಿರುದ್ಧವೇ ಹೋರಾಡಿ ಮೊಲವೇ ನಾಯಿಯನ್ನು ಕಚ್ಚಿ ನೆಲಕ್ಕುರಿಳಿಸಿದ ಮೇಲೆ ಈ ಜನರು ಎಷ್ಟು ಸ್ವಾಭಿಮಾನಿಗಳು, ಈ ಭೂಮಿ ಎಂತಹ ಗಂಡುಭೂಮಿ, ತನ್ನ ಆತ್ಮ ರಕ್ಷಣೆಗೋಸ್ಕರ ಯಾವ ತ್ಯಾಗಕ್ಕೂ ಈ ಜನ ಸಿದ್ಧರಾಗುತ್ತಾರೆ. ಆ ದೃಷ್ಟಿಯಿಂದ ಇದನ್ನು ಮೊಲದ ಒಂದು ಸಾಂಕೇತಿಕವಾಗಿ ಈ ಊರು ಮೊಲವಳ್ಳಿ ಎಂದು ಇಲ್ಲಿ ಸ್ಥಾಪನೆಯಾಗುತ್ತದೆ. ಮುಂದೆ ಇದು ಪ್ರಸಿದ್ಧಿಯಾಗುತ್ತದೆ ಎಂದು ಗಂಗರಸರು ಪ್ರತೀತಿಯಾಗಿ ಹೆಸರನ್ನು ಕಟ್ಟುತ್ತಾರೆ.

೨. ಡಾ.ಜಿ.ವಿ. ದಾಸೇಗೌಡರು ಕನ್ನಡ ಪುಸ್ತಕ ಪ್ರಾಧಿಕಾರದವರು ಪ್ರಕಟಿಸಿರುವ “ಮಂಡ್ಯಾ ಜಿಲ್ಲೆಯ ಜಾತ್ರೆಗಳು” ಎಂಬ ಪುಸ್ತಕದಲ್ಲಿ ‘ಮಳವಳ್ಳಿ’ ಎಂಬ ಪದದ ಉತ್ಪತ್ತಿಯ ಬಗ್ಗೆ ಈ ಕೆಳಗಿನಂತೆ ಬರೆದಿರುತ್ತಾರೆ.
ಅ. ಮಳವಳ್ಳಿ ಸುತ್ತಲ ಪ್ರದೇಶ ಅರಣ್ಯಮಯವಾಗಿತ್ತಂತೆ. ಈ ಕಾಡಿನಲ್ಲಿ ಸುವಾಸನಾಯುತವಾದ ಮಲ್ಲೆ ಹೂವಿನ ಬಳ್ಳಿಗಳು ಅಧಿಕವಾಗಿದ್ದುವಂತೆ, ಈ ಹೂವುಗಳನ್ನು ಕಾಡುಮಲ್ಲೆ ಹೂ ಎನ್ನುತ್ತಿದ್ದರಂತೆ. ಮಲ್ಲೆ ಹೂವಿನ ಬಳ್ಳಿಗಳು ಅಧಿಕವಾಗಿದ್ದ ಈ ಊರನ್ನು ಜನ ‘ಮಲ್ಲೆವಲ್ಲಿ’ ಎಂದು ಕರೆಯುತ್ತಿದ್ದು ಕ್ರಮೇಣ ‘ಮಲ್ಲೆವಲ್ಲಿ’ಯು ಉಚ್ಚಾರಣೆಯಲ್ಲಿ ಮಾರ್ಪಾಟಾಯಿತು. ‘ಮಲ್ಲೆವಲ್ಲಿ’ ಎಂಬ ಪದ ಗಮನಾರ್ಹವಾದುದು-ಮಲ್ಲೆ’ ಎಂದರೆ ಮಲ್ಲೆಯ ಹೂ, ‘ವಲ್ಲಿ’ ಎಂದರೆ ಬಳ್ಳಿ, ನಡೆದಾಡುವ ಮನುಷ್ಯನ ಕಾಲಿಗೆ ಮಲ್ಲೆವಲ್ಲಿ ತೊಡರಾಗುತ್ತಿದ್ದವು; ಅಂತೆಯೇ ಉಚ್ಚಾರಣೆಯಲ್ಲಿ ನಾಲಿಗೆಗೆ ತೊಡರಾಯಿತು. ಸುಲಭ ಮತ್ತು ಸೌಲಭ್ಯಾಕಾಂಕ್ಷಿಯಾದ ಮಾನವನು ‘ಮಲ್ಲವಳ್ಳಿ’ ಎಂದು ಕರೆದ. ‘ಮಲ್ಲವಲ್ಲಿ’ಯು ಉಚಾರಣೆಯಲ್ಲಿ ಮಳವಳ್ಳಿಯಾಯಿತು. ‘ಮಳವಳಿ’ ಪದದ ಗುರುತಿಸಬಹುದು : ಮಲ್ಲೆವಲ್ಲಿ ಮಲ್ಲವಲ್ಲಿ ಮಲವಲ್ಲಿ> ಮಳವಳ್ಳಿ ಇಲ್ಲಿ ‘ಲ’ಕಾರಕ್ಕೆ ನಿಷ್ಪತ್ತಿಯನ್ನು ಹೀಗೆ ‘ಳ’ ಕಾರ ಸಹಜವಾಗಿಯೇ ಬಂದಿದೆ. ಇದು ಉಚ್ಛಾರಣೆಯಲ್ಲಾದ ಗಮನಾರ್ಹ ಬದಲಾವಣೆ.
ಬ. ಕಂಠಸ್ಥ ಸಂಪ್ರದಾಯದಲ್ಲಿ ಮತ್ತೊಂದು ಗಮನಾರ್ಹ ಸಂಗತಿ ಇದೆ. ಮಳವಳ್ಳಿಯ ಸುತ್ತಲೂ ಕಾಡಿತ್ತು. ಈ ಕಾಡು ಪ್ರದೇಶದಲ್ಲಿ ವಿಶೇಷವಾಗಿ ಬಿಳಿಯ ಮೊಲಗಳಿದ್ದುವಂತೆ. ಆದ್ದರಿಂದ ಈ ಊರನ್ನು ‘ಮೊಲದಹಳ್ಳಿ’ ಎಂದು ಕರೆಯುತ್ತಿದ್ದು ಕಾಲಕ್ರಮೇಣ ಮೊಲಹಳ್ಳಿ ಮೊಲವಳ್ಳಿ ಮಳವಳ್ಳಿ ಎಂದಾಗಿರುವ ಸಾಧ್ಯತೆ ಇದೆ ಎನ್ನುತ್ತಾರೆ.

೩. ಈ ಮೇಲಿನ ಎರಡು ಉಹಗಳಿಗಿಂತ ಬೇರೆಯಾದ ವಿಚಾರ ನನ್ನದು.
ಅ. ಮಳವಳ್ಳಿಯು ಬೆಟ್ಟಗುಡ್ಡಗಳಿಲ್ಲದ ಮಟ್ಟಸವಾದ ಪ್ರದೇಶದಲ್ಲಿದೆ. ಮಳವಳ್ಳಿ ತಾಲ್ಲೂಕಿನ ಅಂಚಿನಲ್ಲಿ ಕಾವೇರಿ ಹರಿಯುತ್ತಾಳೆ. ಕಾವೇರಿಯ ಅಕ್ಕ-ಪಕ್ಕ ಬೆಟ್ಟ-ಗುಡ್ಡಗಳಿವೆ. ಆದರೆ ಮಳವಳ್ಳಿ ಊರಿರುವ ಪ್ರದೇಶ ಮಾತ್ರ ಮಟ್ಟಸವಾದ ಪ್ರದೇಶದಲ್ಲಿದೆ. ‘ಮಳವಳ್ಳಿ ಊರು ಮಾಳದಲ್ಲಿ ಹುಟ್ಟಿ ಬೆಳೆದಿದೆ. ಮಳವಳ್ಳಿ ಜನರ ಆಡು ಮಾತಿನಲ್ಲಿ ಮಾಳ ಎಂದರೆ ಮಟ್ಟಸವಾದ ಮೈದಾನ, ಅದಕ್ಕೆ ಹಿಂದೆ ಮಾಳದ ಹಳ್ಳಿ ಎನ್ನುತ್ತಿದ್ದಿರಬೇಕು.
ಮಾಳದಹಳ್ಳಿ ಮಾಳಹಳ್ಳಿಯಾಗಿ ನಂತರ ಜನರ ಮಾತಲ್ಲಿ ಮಾಳವಳ್ಳಿಯಾಗಿ ಓಡಾಡಿ ಕ್ರಮೇಣ ಮಳವಳ್ಳಿಯಾಗಿರಬಹುದೆಂದು ನನ್ನ ಒಂದು ಅಭಿಪ್ರಾಯ. ಬ. ಈ ವಿಷಯದ ಬಗ್ಗೆ ಹಿರಿಯ ಇತಿಹಾಸ ಸಂಶೋಧಕರಾದ ಪ್ರೊ|| ಹ.ಕ. ರಾಜೇಗೌಡರೊಡನೆ ಚರ್ಚಿಸಿರುತ್ತೇನೆ. ಅವರು ನನ್ನ ಅಭಿಪ್ರಾಯವೇ ನೈಜತೆಗೆ ತುಂಬಾ ಹತ್ತಿರವಾದದ್ದು ಹಾಗೂ ಭಾಷಾಶಾಸ್ತ್ರದ ನಿಲುಕಿಗೆ ಸಿಗುವಂತಹದ್ದು ಎಂದು ಹೇಳಿರುತ್ತಾರೆ.
ಈ ಹಿಂದೆ ಈ ನಾಡನ್ನು ಮಾಳವ ಜನಾಂಗದವರು ಆಳುತ್ತಿದ್ದಿರಬೇಕು. ಆ ಜನರ ಮುಖ್ಯ ಊರಾಗಿದ್ದುದರಿಂದ ಇದಕ್ಕೆ ಮಾಳವರಹಳ್ಳಿ ಅಥವಾ ಮಾಳವರಳ್ಳಿ ಎಂದು ಇದ್ದ ಈ ಊರು ಕ್ರಮೇಣವಾಗಿ ಮಳವಳ್ಳಿಯಾಗಿರಬಹುದೆಂದು ನನ್ನ ಇನ್ನೊಂದು ಅಭಿಪ್ರಾಯ. ಈ ಊಹೆಗೆ ಆಧಾರವೆಂದರೆ ಗುಸ್ತಾವ್ ಓಪರ್ಟ್ ಅವರು ಬರೆದಿರುವ ‘ದ್ರಾವಿಡರು’ ಎಂಬ ಪುಸ್ತಕ, ಗುಸ್ತಾವ್ ಓಪರ್ಟ್ ಅವರ ಪ್ರಕಾರ ಮಾಳವರು ಭಾರತದ ಮೂಲನಿವಾಸಿಗಳು. ಶಂಬಾಜೋಷಿ ಅವರ ಪ್ರಕಾರ ಈ ಮಾಳವರು ಕರ್ನಾಟಕಕ್ಕೂ ಮೂಲಪುರುಷರು. ತಾವು ನಾನು ಬರೆದಿರುವ ಭಾರತದ ಮೊದಲ ದೊರೆಗಳು’ ಎಂಬ ಹೊತ್ತಿಗೆಯನ್ನು ಹೆಚ್ಚಿನ ಮಾಹಿತಿಗಾಗಿ ಓದಿರಿ.
ಗುಡುಸ್ಲಾಬಾದ್ ಆಗಿದ್ದ ಮಳವಳ್ಳಿ : ಮಳವಳ್ಳಿಗೆ ಹೈದರಾಲಿಯು ತನ್ನ ಮಗನಾದ ಟಿಪ್ಪುಸುಲ್ತಾನನ್ನು ಯುವರಾಜನನ್ನಾಗಿ ನೇಮಕ ಮಾಡಿದ್ದ. ಆ ಮೈಸೂರಿನ ಹುಲಿ ಟಿಪ್ಪು ಸುಲ್ತಾನನು ಮಳವಳ್ಳಿಗೆ ‘ಗುಡುಸ್ಲಾಬಾದ್’ ಎಂದು ಹೆಸರಿಟ್ಟಿದ್ದನು. ಈ ಹೆಸರು ಮಳವಳ್ಳಿಯ ಜನರ ಬಾಯಲ್ಲಿ ಉಳಿಯದೆ ಈಗ ಕಣ್ಮರೆಯಾಗಿದೆ.
ಮಳವಳ್ಳಿಯ ಸಂಕ್ಷಿಪ್ತ ಇತಿಹಾಸ : ಮಳವಳ್ಳಿಯ ಲಿಖಿತ ಇತಿಹಾಸ ತುಂಬಾ ಹಳೆಯದು. ಎರಡನೇ ಶತಮಾನದಿಂದಲೇ ಮಳವಳ್ಳಿಪುರ ಇತಿಹಾಸದಲ್ಲಿ ಗೋಚರಿಸುತ್ತದೆ. ಗಂಗರು ಎರಡನೆಯ ಶತಮಾನದಿಂದ ಹನ್ನೊಂದನೇ ಶತಮಾನದವರೆಗೆ ಆಳಿದರು. ಈ ಪ್ರದೇಶವು ‘ಚಿಕ್ಕಗಂಗವಾಡಿ’ ಎಂಬ ಆಡಳಿತದ ವಿಭಾಗಕ್ಕೆ ಸೇರಿತ್ತು.
ಕ್ರಿ.ಶ. ಸುಮಾರು ೧೦೦೪ ರಲ್ಲಿ ಚೋಳರು ಗಂಗರಸರ ಸೋಲಿಸಿ ಮಳವಳ್ಳಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮಳವಳ್ಳಿಯನ್ನಾಳಿದರು. ನಂತರ ಹೊಯ್ಸಳರಿಗೂ ಚೋಳರಿಗೂ ನಿರ್ಣಾಯಕ ಯುದ್ಧವಾದ ನಂತರ ಚೋಳರು ಸೋತು ಮೈಸೂರು ಪ್ರಾಂತದಿಂದಲೇ ತೊಲಗಿದರು. ಗಂಗರ ಎಲ್ಲಾ ಸಂಸ್ಥಾನಗಳನ್ನು ಚೋಳರಿಂದ ಜಯಿಸಿದ ಬಿಟ್ಟಿದೇವ ಉರಫ್ ವಿಷ್ಣುವರ್ಧನನು ತನ್ನ ಈ ಮಹಾನ್ ವಿಜಯದ ನಂತರ ‘ವೀರಗಂಗ’ ಎಂಬ ಬಿರುದು ಗಳಿಸಿದನು.
೧೩೯೯ ರಲ್ಲಿ ಮೈಸೂರು ಒಡೆಯರ ಆಡಳಿತದ ತೆಕ್ಕೆಗೆ ಮಳವಳ್ಳಿ ಸೇರಿತು. ಚಿಕ್ಕದೇವರಾಯರ ಕಾಲದಲ್ಲಿ ಮಳವಳ್ಳಿ ಪ್ರಸಿದ್ಧಿ ಹಾಗೂ ಉನ್ನತಿಯನ್ನೂ ಗಳಿಸಿತು. ಆ ಕಾಲದಲ್ಲಿಯೇ ಮಳವಳ್ಳಿಯು ನಾಗರಿಕತೆ, ಸಂಸ್ಕೃತಿ, ಧರ್ಮಶಾಸ್ತ್ರಜ್ಞರ ಹಾಗೂ ವಿದ್ಯಾವಂತರ ಊರಾಗಿತ್ತು. ಚಿಕ್ಕದೇವರಾಯರು ತಮ್ಮ ಕಾಲದಲ್ಲಿ ಇಂದು ಮುದಿಕೆರೆ ಅಥವಾ ದೊಡ್ಡಕೆರೆ ಎಂದು ಹೆಸರಾದ ಮಳವಳ್ಳಿ ಕೆರೆಯನ್ನು ಕಟ್ಟಿಸಿದರು.
ಮೈಸೂರು ಒಡೆಯರಿಂದ ಅಧಿಕಾರ ಕಸಿದುಕೊಂಡಿದ್ದ ಹೈದರಾಲಿಯು ಟಿಪ್ಪುವಿಗೆ ಮಳವಳ್ಳಿಯನ್ನು ಜಾಗೀರಾಗಿ ಕೊಟ್ಟಿದ್ದ.
೧೭೯೯ರಲ್ಲಿ ನಡೆದ ನಾಲ್ಕನೇ ಮೈಸೂರು ಯುದ್ಧವು ಮಳವಳ್ಳಿಯಲ್ಲಿ ನಡೆಯಿತು. ಆ ಯುದ್ಧದಲ್ಲಿ ಟಿಪ್ಪುಸುಲ್ತಾನನು ಜನರಲ್ ಹ್ಯಾರಿಸ್‌ನ ಬ್ರಿಟಿಷ್ ಸೈನ್ಯದ ಎದುರು ಸೋತು ಶ್ರೀರಂಗಪಟ್ಟಣಕ್ಕೆ ಓಡಿ ಹೋದನು. ಆತನು ಅಂದು ಬಳಸಿದ ಮಾರ್ಗವನ್ನು ಇಂದಿಗೂ ಮಳವಳ್ಳಿ ಜನರು ‘ಸುಲ್ತಾನ್ ರಸ್ತೆ’ ಎಂದು ಕರೆಯುತ್ತಾರೆ.


-ಮನಂ(ಮಳವಳ್ಳಿ ನಂಜುಂಡಸ್ವಾಮಿ)ಐಪಿಎಸ್
ಬೆಂಗಳೂರು
*****