ಅನುದಿನ ಕವನ-೩೭೮, ಕವಿ: ವಿಠೋಬಾ ಹೊನಕಾಂಡೆ, ಬೆಂಗಳೂರು, ಕವನದ ಶೀರ್ಷಿಕೆ: ಯಾರು ನಾನು!?

ಯಾರು ನಾನು??

ಬಾ ಸಿರಿವಂತಿಕೆಯೆ
ಬಂದು ನೋಡು
ಪ್ಲಾನು ಮಾಡು
ಪ್ಲಾನು ಮಾಡಿ
ಕದ್ದು ಒಯ್ದು ಬಿಡು
ನಮ್ಮನೆಯ ಬಡತನವ
ನಮ್ಮ ಗುಡಿಸಲಿಗಿಲ್ಲ ಬಾಗಿಲು ll

ಬಾ ಮೃಷ್ಠಾನ್ನವೇ
ಬಂದು ನೋಡು
ಬಂದುಂಡು ನೋಡು
ತಿಂದುಂಡು ಹೋಗುವಾಗ
ಅಳಿದುಳಿದ ಅನ್ನವ
ಬಿಟ್ಟು ಹೋಗು
ಅನ್ನ ದೇವರೆಂದು ನಂಬಿ ಕಾಯುತಿರುವೆ ನಾನು ll

ಹರಿದ ಹರಕಲು
ತೊಟ್ಟು ಉಟ್ಟು ಬಿಟ್ಟ
ಬಟ್ಟೆಯ ತೊಟ್ಟು
ಹೊಸ ವಿನ್ಯಾಸದ
ಹೊಸ ಬಟ್ಟೆ ಎಂದು
ಖುಷಿಪಡುವೆ ನಾನು
ನಮ್ಮನೆಯ ಹರಕು ಬಟ್ಟೆಗಳನೆಲ್ಲ
ಒಯ್ದು ಬಿಡಿ ನೀವುll

ಹರಕು ಚಪ್ಪಲಿ ಹಾಕಿ
ನೂರಾರು ಮೈಲಿ ನಡೆಯುವವ ನಾನು
ಬನ್ನಿ ನಮ್ಮನೆಗೆ
ನಮ್ಮನೆಯ ಬಾಗಿಲಿಗೆ ಬಿಗವಿಲ್ಲ
ಬಂದು ಪ್ಲಾನು ಮಾಡಿ
ಚಪ್ಪಲಿಗಳನೆಲ್ಲ ಕದ್ದೊಯ್ದು ಬಿಡಿ
ನಾನು ಪಿರ್ಯಾದಿ ನೀಡಲ್ಲ
ನನ್ನ ಪಿರ್ಯಾದು
ಸ್ವೀಕರಿಸೋದೂ ಇಲ್ಲ
ಬಡವನಲ್ಲವೇ ನಾನು ll

-ವಿಠೋಬಾ ಹೊನಕಾಂಡೆ, ಬೆಂಗಳೂರು
*****