ಅನುದಿನ ಕವನ-೩೮೦, ಕವಿ: ಶಿವೈ ವೈಲೇಶ್ ಪಿ ಎಸ್. ಕೊಡಗು, ಕವನದ ಶೀರ್ಷಿಕೆ: ಸಗ್ಗವ ತಂದಿದೆ

ಸಗ್ಗವ ತಂದಿದೆ

ಸುಗ್ಗಿಯ ಹಬ್ಬವು ಬಂದಿದೆ ನೋಡಿರಿ
ಸಗ್ಗವ ತಂದಿದೆ ಜಗಕೆಲ್ಲಾ
ಹುಗ್ಗಿಯ ಬೆಳೆಯುವ ರೈತರ ಬಾಳಲಿ
ಹಿಗ್ಗನು ಮೂಡಿಸುತಿಹುದಲ್ಲಾ

ಹೊಸಬಗೆ ದಿರಿಸನು ಧರಿಸಿದ ಚಿಣ್ಣರು
ಪಸರಿಸಿ ಸಿಹಿಯನು ಮನೆಮನೆಗೆ
ಕಸವರವಾದವು ಕಾಣುವ ಕಣ್ಣಿಗೆ
ಖುಷಿಯಲಿ ನಗುತಿದೆ ಸಿಹಿಯ ಮೊಗೆ

ಹಸೆಮಣೆಗೇರಿಸಿ ಮಕ್ಕಳ ಬಾಳನು
ಹೊಸೆಯುವ ಪೀಠಿಕೆ ಹಿರಿಯರದು
ಹೆಸರಿಗೆ ಹಬ್ಬವು ಕನ್ಯೆಯ ಹುಡುಕುವ
ತುಸು ಕೊಸರಾಟವು ಗಂಡಿನದು

ದೂರದ ಸೀಮೆಯ ರಾಸು ಖರೀದಿಸೆ
ನೂರಾರೂರನು ತಿರುಗಣ್ಣ
ಹೋರಿಯ ಬೆದರಿಸಿ ಬೆಂಕಿಯ ಮೇಗಡೆ
ಹಾರಿಸುವಾಟವ ನೋಡಣ್ಣ

ಎಳ್ಳಿನ ಜೊತೆಯಲಿ ಕಬ್ಬಿನ ತುಂಡಿಗೆ
ಬೆಲ್ಲವ ಬೆರೆಸುತ ಹಂಚಿದರು
ಒಳ್ಳೆಯ ಮಾತಿಗೆ ಮೈಮನ ಬಾಗಿಸಿ
ಗೆಲ್ಲುತ ದ್ವೇಷವ ಮೆರೆದಿಹರು

ಇಂದಿರ ಚಂದಿರ ಸುಂದರ ಸೂರ್ಯನ
ಮಂದದ ನಡೆಯನು ತಿಳಿಯೋಣ
ಮಿಂದಿಹೆವೆನ್ನುತ ಪ್ರೀತಿಯ ಮಡಿಲಲಿ
ಚೆಂದದ ಜೀವನ ನಡೆಸೋಣ

[ರಾಸು=ದನ
ಕಸವರ= ಚಿನ್ನ
ಇಂದಿರ= ಇಂದ್ರ]

-ಶಿವೈ ವೈಲೇಶ್ ಪಿ ಎಸ್. ಕೊಡಗು