ಅನುದಿನ ಕವನ-೩೮೨, ಕವಿ: ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು, ಕವನದ ಶೀರ್ಷಿಕೆ:ಚಳಿಗಿಷ್ಟು….ಹಾಕಿಕೊಳ್ಳದಿದ್ದರೆ…..

ಚಳಿಗಿಷ್ಟು….ಹಾಕಿಕೊಳ್ಳದಿದ್ದರೆ…..


ಪಾನಪ್ರಿಯ ನಾನು
ಏನಾದರೂ ಕುಡಿಯುತ್ತೇನೆ
ಸುಂದರ ಶಿಲಾಮೂರ್ತಿಯಾಗಲು
ಎಂತಹ ಏಟನ್ನಾದರೂ ತಡೆಯುತ್ತೇನೆ!

ಕವಲುದಾರಿಯಲ್ಲಿ ನಿಂತಿದ್ದೇನೆ
ದಾರಿ ತೋರಿ
ದಯಮಾಡಿ
ಇಲ್ಲೇ ಇತ್ತು ಮನೆ
ಬಾರಿಂದ ಬಂದ ಮೇಲೆ ಕಾಣುತ್ತಿಲ್ಲ
ಹುಡುಕಿಕೊಡಿ!

ಅವಳು ನಕ್ಕರೆ
ಚೆಲ್ದಂಗ್ ಬೆಳದಿಂಗ್ಳಲ್ ಹಾಲು
ಸಿಕ್ರಂತೂ
ಹೊಡ್ದಂಗ್ ಸುಕ್ಕಾ ಆಲ್ಕೋಹಾಲು!

ನೈಂಟಿಯೋ…ಸಿಕ್ಸ್ಟಿಯೋ
ಲೆಕ್ಕ ಇಟ್ಟವರಾರು ತಂದೆ;
ಆಕಿ ಮುರಿದ ಮನದ ಚೂರುಗಳ
ಮುಂದೆ!

ಕರುಳೆಂಬ ಬಟ್ಟಲಿಗೆ
ಸುರೆಯೆಂಬ ಬೆಂಕಿ ಸುರಿದು ಬಿಡು ಸಾಕಿ
ಕಣ ಕಣದಿ ಅವಿತ ಪ್ರೀತಿ
ಸುಡಲಿ ಒಳಗಿನದೆಲ್ಲಾ ಹೊರಹಾಕಿ!

ಚಳಿ ಅಂತ ಸುಮ್ನಿದ್ರಾತಾ
ಅವುಚ್ಕನಕವಳಿಲ್ಲಂದ್ರೆ ಪಾಪ ;
ಗಾಜಿನ ಲೋಟದ ಗಮ್ಮತ್ತು
ಎದಿಗಿಳಿದರೆ ಏರ್ತೈತೆ ಎಲ್ಲಾ ತಾಪ!

ಬೆಂಕಿ ಕೂಡಾ ತಣ್ಣಗೆ ಕಣ್ರಿ
ಸಾಯ್ಸೋ ಚಳಿ ಮುಂದೆ
ಒಂದೆರಡು ಗುಟುಕು ಹೀರಿದ್ರೆ
ಎದೆ ಮತ್ತು ಎದ್ಯಾಗಳ ನೆನಪೂ ಒಂದೇ!

ಹಗಲೆಂಗೋ ಕಳಿತದಪ
ದರಿದ್ರ ರಾತ್ರಿಗಳು ಹಿಡಿದೇ ಬರುತ್ತವೆ ಚಳಿಯ ಬಂದೂಕ
ಎದಿಗಿಳಿದವಳಿಲ್ಲ …ಹೆಂಡದ ಲೋಟದ ಹೊರತು
ಅದಿದ್ರೆ ಸಾಕಲ್ವ ಗಂಟಲು,ಎದೆ , ಕರುಳು ಹೊತ್ತಿ ಉರಿಯಾಕ!!

ನೆನಪು,ಚಳಿ, ಸುರೆ ಮೂರು ಹಿತವೇ
ಕಳ್ಕಂಡಿರೋ ಮುಸುಡಿಗಳಿಗೆ
ಉಲ್ಡುತ್ತಿದ್ದರೆ ಬಾಟಲಿಗಳು
ಅರಿವಾಗದು ಖಬರಗೇಡಿಗಳಿಗೆ!?

-ಸಂತೆಬೆನ್ನೂರು ಫೈಜ್ನಟ್ರಾಜ್
*****