ಬಳ್ಳಾರಿ, ಜ.22: ಕರ್ನಾಟಕ ಜಾನಪದ ಅಕಾಡೆಮಿಯ 2021 ಸಾಲಿನ ಪ್ರಶಸ್ತಿಗೆ ಜಿಲ್ಲೆಯ ಕಂಪ್ಲಿ ತಾಲೂಕಿನ ಸೋಮಲಾಪುರ ಗ್ರಾಮದ ಬುರ‍್ರಕಥಾ ಕಲಾವಿದೆ ಪೆದ್ದ ಮಾರೆಕ್ಕ ಅವರು ಭಾಜನರಾಗಿದ್ದಾರೆ.
ಪರಿಶಿಷ್ಟ ಜಾತಿಯ ಅಲೆಮಾರಿ ಬುಡ್ಗ ಜಂಗಮ ಸಮುದಾಯದ ,58 ವರ್ಷದ ಮಾರೆಕ್ಕ ಅವರಿಗೆ ಬರ‍್ರಕಥಾ ಕಲೆ
ತಂದೆ ಕಥಲಾ ಪೆದ್ದಯ್ಯ ತಾಯಂದಿರಾದ ಹೊನ್ನೂರಮ್ಮ ಮತ್ತು ಸಂಕಲ ಗಿಡ್ಡಮ್ಮ ಅವರ ಬಳುವಳಿ. ಬಾಲ್ಯದಲ್ಲಿ ಆಲಿಸಿ ಕಲಿತು ಹಾಡಲು ಆರಂಭಿಸಿದವರು. ಇವರ ಗಂಡ ದಿವಂಗತ ದೊಡ್ಡ ಮಾರೆಪ್ಪ, ಸಂಗಡಿಗರಾದ ಸಹೋದರ ಬಳ್ಳಾರಿ ಮಾರೆಪ್ಪ ಬಲಗೊಲ್ಲ(೫೭), ಸಹೋದರಿ ಸಣ್ಣ ಮಾರೆಕ್ಕ ಅಶ್ವ(೫೫), ಚಿಕ್ಕಪ್ಪನ ಮಗಳಾದ ಲಿಂಗಮ್ಮ ರೇವಲ್ಲಿ, ಮಗ ವಿ ಮಾರೇಶ (೩೪) ಅವರ ಸಹಕಾರದೊಂದಿಗೆ ಊರೂರು ಅಲೆಯುತ್ತಾ ರಾಜಮಹಾರಜರ ಮತ್ತು ಮಹಿಳೆಯ ಸಂವೇದನೆಗಳನ್ನು, ನೀತಿ ಮೌಲ್ಯಗಳನ್ನು ತನ್ನ ಬುರ‍್ರಕಥಾ ಕಲಾ ಪ್ರಕಾರದೊಂದಿಗೆ ಮಹಾಕಾವ್ಯಗಳನ್ನು ತಂಬೂರಿ, ಬುಡ್ಗ ವಾದ್ಯದ ಮೂಲಕ ಹಾಡುತ್ತಾ ಜನಸಾಮಾನ್ಯರಿಗೆ ಜಾಗೃತಿಯನ್ನು ಮೂಡಿಸಿದವರು. ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಾವುಗಳು ಸಂಭವಿಸಿದಾಗ ಬುರ‍್ರಕಥೆ ಪೆದ್ದ ಮಾರೆಕ್ಕ ಮತ್ತು ಸಂಗಡಿಗರನ್ನು ಆಹ್ವಾನಿಸಿ ಇಡೀ ರಾತ್ರಿ ಬುರ‍್ರಕಥೆಯ ಮೂಲಕ ಶೋಕಗೀತೆಗಳನ್ನು ಗ್ರಾಮಸ್ಥರು ಹಾಡಿಸುತ್ತಾರೆ.
ಬುರ‍್ರಕತೆಗಳನ್ನು ಹೇಳಿ ದವಸಧಾನ್ಯಗಳನ್ನು ದಾನಧರ್ಮದ ಮೂಲಕ ಪಡೆದು ಜೀವನ ಸಾಗಿಸುತ್ತಿದ್ದ ಇವರ ತಂದೆ ತಾಯಿ ತೆಲುಗಿನಲ್ಲಿ ಹಾಡುತ್ತಿದ್ದ ಬುರ‍್ರಕಥಾ ಮಹಾಕಾವ್ಯಗಳನ್ನು ಮಾರೆಕ್ಕ ಅವರು ಕನ್ನಡದಲ್ಲಿ ಹಾಡಲು ನಾಡೋಜ ದರೋಜಿ ಈರಮ್ಮ ಅವರೇ ಸ್ಪೂರ್ತಿ ಮತ್ತು ಪ್ರೋತ್ಸಾಹವೂ ಕಾರಣವಾಗಿದೆ.
ಆದೋನಿ ಲಕ್ಷ್ಮಮ್ಮನ ಕಾವ್ಯ, ಜೈ ಸಿಂಗ್ ರಾಜ ಮತ್ತು ಮಹಮ್ಮದ್ ಖಾನರ ಕಾವ್ಯ, ಗಂಗಿ ಗೌರಿ ಇತ್ಯಾದಿ ಮೌಖಿಕ ಮಹಾಕಾವ್ಯಗಳನ್ನು ಹಾಡುವ ಮಾರೆಕ್ಕ .ಅವರು, ಹಂಪಿ ಉತ್ಸವ, ಜನಪರ ಉತ್ಸವ, ಆದಿವಾಸಿ ಉತ್ಸವ, ಜಾನಪದ ಜಾತ್ರೆ, ರಾಜ್ಯ ಹೊರರಾಜ್ಯಗಳಲ್ಲಿ ಬುರ‍್ರಕಥಾ ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗುರುಶಿಷ್ಯ ಪರಂಪರೆ ಯೋಜನೆಯಡಿಯಲ್ಲಿ ಬುರ‍್ರಕಥಾ ಕಲೆಯ ತರಬೇತಿ ಗುರುಗಳಾಗಿ ಆಸಕ್ತರಿಗೆ ಕಲೆಯನ್ನು ಕಲಿಸಿದ್ದಾರೆ. ಅಮೇರಿಕಾದ ಕೆಲವು ಸಂಶೋಧಕರಿಗೆ ಸಂಶೋಧನಾ ಆಕರವಾಗಿದ್ದಾರೆ.
೨೦೧೫ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾಯಿತರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಶಸ್ತಿ ಪುರಸ್ಕಾರ: ಜಾನಪದ ಕ್ಷೇತ್ರಕ್ಕೆ ಪೆದ್ದ ಮಾರೆಕ್ಕ ಸಲ್ಲಿಸಿರುವ ಅನುಪಮ ಸೇವೆ ಪರಿಗಣಿಸಿ ೨೦೧೫ರಲ್ಲಿ ಹಳೇ ದರೋಜಿಯ ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಷನ್ , ನಾಡೋಜ ಬುರ‍್ರಕಥಾ ಈರಮ್ಮ ಪ್ರಶಸ್ತಿ ನೀಡಿ ಗೌರವಿಸಿದೆ.
ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ಪೆದ್ದ ಮಾರೆಕ್ಕ ಅವರು, ರಾಜ್ಯ ಸರ್ಕಾರದ ಕರ್ನಾಟಕ ಜಾನಪದ ಅಕಾಡೆಮಿ ತಮಗೆ ೨೦೨೧ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ತುಂಬಾ ಸಂತೋಷವಾಗಿದೆ ಎಂದರು. ಪ್ರಶಸ್ತಿ ಗೆ ಆಯ್ಕೆ ಮಾಡುವ ಮೂಲಕ ನನಗೆ ಮತ್ತಷ್ಟು ಉತ್ತೇಜಿಸುತ್ತಿರುವ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಮಂಜಮ್ಮ ಜೋಗತಿ, ಸದಸ್ಯರಿಗೆ ವಿಶೇಷವಾಗಿ ಯುವ ಸಂಘಟಕ ಡಾ. ಅಶ್ವ ರಾಮು ದರೋಜಿ ಅವರಿಗೆ ಧನ್ಯವಾದ ಸಲ್ಲಿಸಿದರು.
ಅಭಿನಂದನೆ: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಪೆದ್ದ ಮಾರೆಕ್ಕ ಅವರನ್ನು ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ ಅಭಿನಂದಿಸಿದ್ದಾರೆ.
*****