ನಾ ಓದಿದ ಪುಸ್ತಕ: ನನ್ನೊಡೆಯ ಬುದ್ಧಪ್ರಿಯಾ, ಕೃತಿಕಾರರು: ನಾಗರತ್ನಾ ಭಾವಿಕಟ್ಟಿ, ಹುನಗುಂದ, ಕೃತಿ ಓದಿದವರು: ನಾಮದೇವ ಕಾಗದಗಾರ, ರಾಣೇಬೆನ್ನೂರು

ನನ್ನೊಡೆಯ ಬುದ್ಧಪ್ರಿಯಾ
(ಕವಯತ್ರಿ:ನಾಗರತ್ನಾ ಭಾವಿಕಟ್ಟಿ, ಹುನಗುಂದ)

ಬಾಗಲಕೋಟೆ ಜಿಲ್ಲೆಯ ಹುನಗುಂದದ, ಉಪನ್ಯಾಸಕಿ ಡಾ.ನಾಗರತ್ನಾ ಭಾವಿಕಟ್ಟಿಯವರ ಕವಿತೆಗಳ ಮೊದಲ ಈ ಗುಚ್ಛವನ್ನು ಕೈಗೆತ್ತಿಕೊಂಡಾಗ ಒಂದು ಮುಗ್ಧ ಹೃದಯದೊಳಗೆ ಪಿಸುಗುಟ್ಟುವ ಕವಿತೆಯ ಡವಡವ ಸದ್ದು! ಸದ್ದಿಲ್ಲದೇ ಕರ್ಣಪಟಲದಿಂದ ಹೃದಯದ ಕದ ತಳ್ಳಿ ನುಸುಳಿತು. ಹಗರಿಮೊಮ್ಮನಹಳ್ಳಿಯ ಪ್ರಜಾವಾಣಿ ಪತ್ರಕರ್ತ ಮಿತ್ರ ಸಿ.ಶಿವಾನಂದರವರು ಒಂದು ತಿಂಗಳ ಹಿಂದೆ ಈ ಸಂಕಲನದ ಮುಖಪುಟ ವಿನ್ಯಾಸಕ್ಕಾಗಿ ಹಸ್ತ ಪ್ರತಿ ಕಳಿಸಿದ್ದರು. ಸೂಕ್ತ ಚಿತ್ರ ವಿನ್ಯಾಸ ಮಾಡಲು ಈ ಸಂಕಲನದ ಹಸ್ತಪ್ರತಿಯಲ್ಲಿಯ ಪ್ರತಿಪುಟವನ್ನೂ ತಿರಿವಿ ಹಾಕಿದ್ದೆ. ಆಗಲೇ ಈ ಕವಿತೆಗಳನ್ನು ಓದಿ ಪುಳಕಗೊಂಡಿದ್ದೆ. ಈಗ ಮುದ್ರಣಗೊಂಡು ನಾಡಿನ ಓದುಗರ ಕೈ ಸೇರಿದೆ. ಅಲ್ಲದೇ ನನ್ನ ಕೈ ಸೇರಿ ಮತ್ತೆ.. ಮತ್ತೇ.. ಓದಿಸಿಕೊಂಡು ಹೋಗುತ್ತಿದ್ದಂತೆ ನಾನು ‘ಬುದ್ಧಪ್ರಿಯ’ ನಾದೆ.

ವ್ಯಕ್ತಿಗತ ಅನುಭವದ ಜೊತೆ ಜೊತೆಗೆ ಸಾಮಾಜಿಕ ಅನುಭವವನ್ನೂ ಸಂಕರಿಸಿ, ಬದುಕಿನ ಅನುಭವವನ್ನು ಕವಿತೆ ಕಟ್ಟುವಿಕೆ ಮೂಲಕ ಟೀಕಿಸುತ್ತಾರೆ. ಕಾವ್ಯ ರಚನೆಯೊಂದು ಕಲೆ, ಧ್ಯಾನಸ್ಥಿತಿ. ತಪಸ್ಸು. ವಿನೂತನ ಭಾವಗಳು ಮನದಾಳದಲ್ಲಿ ಅರಳುವಾಗ ಅವುಗಳನ್ನು ಒಂದೆಡೆ ಪೋಣಿಸಿ ಕವಿತೆಯಾಗಿಸುವ ಕ್ರಿಯೆ ಅದ್ಭುತವಾದದು. ಈ ನವುರು ಭಾವನೆಯನ್ನೂ ಕವಿತೆಯಾಗಿಸುವಲ್ಲಿ ಕವಯತ್ರಿ ಯಶಸ್ವಿಯಾಗಿದ್ದಾರೆ. ಕವಯತ್ರಿಗೆ ಇಲ್ಲಿ ಕವಿತೆ ಒಲಿದಿದ್ದಾಳೆ. ಜೀವನ ಪ್ರಸಂಗಗಳನ್ನು ಕಾವ್ಯವಾಗಿಸುವ ಕಲೆ ಸರಾಗವಾಗಿದೆ. ಹೀಗೇ ನಾಗರತ್ನಾರವರ ಕವಿತೆಗಳು ತಮ್ಮ ತಮ್ಮ ವಲಯದಲ್ಲಿ ತಮ್ಮದೇ ಆದ ಭಾವ ಸಿಂಚನ ಗೈದಿವೆ. ವೈವಿಧ್ಯಮಯ ವಿಷಯಗಳು ಕವಿತೆಗೆ ವಸ್ತುವಾಗಿವೆ. ಈ ಎಲ್ಲಾ ಹಿನ್ನಲೆಯನ್ನು ಗಮನಿಸಿದಾಗ ಸಾಹಿತ್ಯ ವಲಯದಲ್ಲಿ ಕವಿಗೆ ಉಜ್ವಲ ಭವಿಷ್ಯವಿದೆ ಎನ್ನಬಹುದು.

ನಾಗರತ್ನಾರವರ ಪ್ರಥಮ ಕವನ ಸಂಕಲನ ‘ನನ್ನೊಡೆಯ ಬುದ್ಧಪ್ರಿಯಾ’, ಹುನುಗುಂದದ ಅಶೋಕ ಪ್ರಕಾಶನದ ಮೂಲಕ ತನ್ನ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಸಹೃದಯರ ಮನದಂಗಳಕ್ಕೆ ಕಿಲಕಿಲನೆ ನಗುನಗುತ್ತಾ ಬುದ್ಧಪ್ರಿಯನ್ನಾಗಿಸಲು ಬಂದಿದೆ. ತೊದಲ್ನುಡಿಯ ಕಂದನ ಸವಿ ಮಾತಿನ ಲಲ್ಲೆಯ ಮಾತುಗಳು ಮನಕೆ ಮುದಗೊಳಿಸುವಂತೆ ಈ ಸಂಕಲನವು ಓದುಗ ವಲಯವನ್ನು ಮುದಗೊಳಿಸುತ್ತದೆ ಎಂಬ ಭರವಸೆ ನನಗಿದೆ. ನಾಗರತ್ನಾರವರ ಪ್ರಥಮದ ಸಂಭ್ರಮ, ಪುಳಕ, ಖುಷಿಯೊಂದಿಗೆ ನಾವು ಜೊತೆಯಾಗೋಣ ಅಲ್ಲವೇ…! ಮುಂದಿನ ಮುಂಬೆಳಕಿನಲ್ಲಿ ನಾಗರತ್ನಾರವರ ಕಾವ್ಯದೆತ್ತರ ಇನ್ನಷ್ಟು ಎತ್ತರವಾಗಿ ಬೆಳೆಯಲಿ. ಅವರೆದೆಗೆ ಬಿದ್ದ ಅಕ್ಷರವೆಲ್ಲ ಕಾವ್ಯ ಕುಸುಮಗಳಾಗಿ ಅರಳಲಿ ಎಂದು ಹಾರೈಸೋಣ…

-ನಾಮದೇವ ಕಾಗದಗಾರ, ರಾಣೇಬೆನ್ನೂರು