ಅನುದಿನ ಕವನ-೩೯೧, ಕವಯತ್ರಿ: ಸುಮಂಗಳಾ ಎಸ್ ಹಂಚಿನಾಳ, ಕೊಪ್ಪಳ, ಕವನದ ಶೀರ್ಷಿಕೆ: ಗಣರಾಜ್ಯೋತ್ಸವ

 

ಕವಯತ್ರಿ ಪರಿಚಯ:
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ತಳಕಲ್ಲು ಗ್ರಾಮದವರಾದ (ಬಳ್ಳಾರಿಯ ಹಿರಿಯ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರ ಅವರ ಸ್ವಗ್ರಾಮವೂ ತಳಕಲ್ಲು) ಸುಮಂಗಲಾ ಹವ್ಯಾಸಿ ಬರಹಗಾರ್ತಿ. ಸುತ್ತಮುತ್ತಲ ಹತ್ತಾರು ಹಳ್ಳಿಗಳಿಗೆ ಸೈಕಲ್ ಮೇಲೆ ಸಂಚರಿಸಿ ಮನೆ-ಮನೆಗೆ ಭೇಟಿ ಕೊಟ್ಟು ಜನತೆಯ ಕ್ಷೇಮ ವಿಚಾರಿಸಿ ಅಲ್ಪ-ಸ್ವಲ್ಪ ನೆಗಡಿ, ಕೆಮ್ಮು ಇದ್ದವರನ್ನೂ ಯಾವುದನ್ನೂ ಅಲಕ್ಷಿಸಬಾರದೆಂದು ಎಚ್ಚರಿಸಿ ಚಿಕಿತ್ಸೆ ನೀಡಿ ಬಡವರಿಗೆ ಉಚಿತ ಗುಳಿಗೆ ನೀಡಿ ಸೈಕಲ್ ಡಾಕ್ಟರ್, ಬನ್ನಿಕೊಪ್ಪ ಡಾಕ್ಟರ್ ಎಂದು ಜನಪ್ರಿಯರಾಗಿದ್ದ ಕೀ.ಶೇ.ಗ್ರಾಮೀಣ ವೈದ್ಯ ಡಾ.ವಿ.ವಿ.ಗುಂಜಾಳ-ಶಾಂತಮ್ಮ ದಂಪತಿಗಳ ಸುಪುತ್ರಿ.
ಅಜ್ಜ-ಮುತ್ತಜ್ಜರ ಊರಾದ ಬನ್ನಿಕೊಪ್ಪ ಗ್ರಾಮದಲ್ಲಿ 10.6.1956 ರಂದು ಜನಿಸಿದ ಸುಮಂಗಲಾ ಅವರು  ಬಾಲ್ಯದಿಂದಲೇ ಕವನ ರಚನಾಭಿರುಚಿ ಆಸಕ್ತಿ ಬೆಳೆಸಿಕೊಂಡದ್ದು ಗಮನಾರ್ಹ. ಹಲವಾರು ಕವನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನೇಕ ಪ್ರತಿಷ್ಠಿತ ವೇದಿಕೆಗಳ ಕವಿಗೋಷ್ಠಿಗಳಲ್ಲಿ ಕವನ ವಾಚಿಸಿ ಬಹುಮಾನ, ಸನ್ಮಾನ, ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬಿಎಸ್ಸಿ ಪದವೀಧರೆಯಾದ ಸುಮಂಗಲಾ ತುಂಗಭದ್ರಾ ಗ್ರಾಮೀಣ ಬ್ಯಾಂಕ್, ಪ್ರಗತಿ ಗ್ರಾಮೀಣ ಬ್ಯಾಂಕ್ ಎಂದು ಹೆಸರಾಗಿ ಈಗ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಂದು ಕರೆಯಲ್ಪಡುವ ಬ್ಯಾಂಕಿನ ನಿವೃತ್ತ ಅಧಿಕಾರಿ. ಇವರ ಪತಿ  ಪಿ.ಆರ್.ಇ.ಡಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ,  ಪ್ರಸ್ತುತ ವಿಶ್ರಾಂತಿ ಜೀವನ ನಡೆಸುತ್ತಿರುವ ಶಾಂತಪ್ಪ ಹಂಚಿನಾಳ ಅವರು ಪ್ರಸಿದ್ಧ ಕವಿ ಚಾಮರಸನ ಊರಾದ ಗದಗ ಜಿಲ್ಲೆಯ ನಾರಾಯಣಪುರದವರು.                               ಸುಮಂಗಲಾ ಎಸ್. ಹಂಚಿನಾಳ ಕುಟುಂಬ ವತ್ಸಲ ಸದ್ ಗೃಹಿಣಿ. ಇವರ ಜ್ಯೇಷ್ಠ ಪುತ್ರ ಸಿವಿಲ್ ಇಂಜಿನೀಯರ್, ದ್ವಿತೀಯ ಪುತ್ರ ಬಿಸಿಎ ಪದವಿ ಪೂರೈಸಿ ಎಂ.ಎನ್.ಸಿ ಕಂಪನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಓದುವುದು, ಸದಭಿರುಚಿಯ ಕವನ ಲೇಖನಗಳನ್ನು ಬರೆಯುವುದು , ಸಮಾಜ ಸೇವಾ ಕಾರ್ಯಗಳಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸುವುದು, ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ವಿಧಾಯಕ ಚಟುವಟಿಕೆಗಳಲ್ಲಿ ಕಾಯಾ ವಾಚಾ ಮನಸಾ ತೊಡಗಿಸಿಕೊಳ್ಳುವುದು ಇವರ ಹವ್ಯಾಸ.

ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಸುಮಂಗಳಾ ಎಸ್ ಹಂಚಿನಾಳ ಅವರ ‘ಗಣರಾಜ್ಯೋತ್ಸವ’ ಸಕಾಲಿಕ ಕವಿತೆ ಪಾತ್ರವಾಗಿದೆ.,👇

ಗಣರಾಜ್ಯೋತ್ಸವ

ಬಂದಿತು ಹೆಮ್ಮೆಯ ಗಣರಾಜ್ಯೋತ್ಸವ,
ತಂದಿತು ಎಲ್ಲೆಡೆ ನವೋಲ್ಲಾಸವ – ಪ

ಪ್ರಜಾಪ್ರಭುತ್ವಕ್ಕೆ ಶಾಸನದ ಮಾನ್ಯತೆ ದೊರೆತ ದಿನ,
ಪ್ರಜಾಸತ್ತಾತ್ಮಕ ಗಣರಾಜ್ಯವಾದ ಶುಭ ದಿನ,
ವಿಶ್ವ ಕಂಡ ಶ್ರೇಷ್ಠ ಸಂವಿಧಾನ ಪಡೆದ ಸುದಿನ,
ಭಾರತೀಯರೆಲ್ಲರೂ ಹೆಮ್ಮೆ ಪಡುವ ಸಂತಸದ ದಿನ – 1

ಸಾಮಾಜಿಕ ಪಿಡುಗುಗಳಿಗೆ ಕೊನೆ ಹಾಡಲು,
ಭದ್ರ ಅಡಿಪಾಯ ಹಾಕಿದ ಮಹತ್ವದ ದಿನ,
ಇತರ ರಾಷ್ಟ್ರಗಳಿಂದ ಮೆಚ್ಚುಗೆ ಪಡೆದ,
ದೀರ್ಘ ಲಿಖಿತ ಸಂವಿಧಾನ ಸ್ವೀಕೃತವಾದ ದಿನ – 2

ದೇಶಕಾಗಿ ಪ್ರಾಣತೆತ್ತ ವೀರರ ಸಂಸ್ಮರಣ ದಿನ,
ಸ್ವತಂತ್ರ ಭಾರತದ ಭಾಗ್ಯದ ಬಾಗಿಲು ತೆರೆದ ದಿನ,
ಜಾತ್ಯಾತೀತ ಸಂವಿಧಾನ ನಮ್ಮದೆಂದು ನೆನೆವ ದಿನ,
ಪ್ರಜಾ ಸಾರ್ವಭೌಮ ಗಣರಾಜ್ಯವೆಂದು ತಿಳಿಸುವ ದಿನ – 3

ಭಾರತೀಯರ ಸಡಗರದ ರಾಷ್ಟ್ರೀಯ ಹಬ್ಬ,
ಹುತಾತ್ಮರಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ಹಬ್ಬ,
ಅಂಬೇಡ್ಕರ ಅವರಿಗೆ ಋಣಿಯಾಗಿರಬೇಕೆಂದು ಸಾರುವ ಹಬ್ಬ,
ಉಳಿಸಿ ಬೆಳೆಸಬೇಕೆಂದು ವೀರ ಸಂಕಲ್ಪ ತೊಡುವ ಹಬ್ಬ- 4

-ಸುಮಂಗಲಾ.ಶಾಂತಪ್ಪ.ಹಂಚಿನಾಳ,
ನಿವೃತ್ತ ಅಧಿಕಾರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಕೊಪ್ಪಳ.
*****