ಹಗರಿಬೊಮ್ಮನಹಳ್ಳಿ, ಜ.27: ಮಾನವೀಯ ಮೌಲ್ಯಗಳ ಮಹಾ ಆಗರ ಭಾರತೀಯ ಸಂವಿಧಾನ ಎಂದು ಹಂಪಾಪಟ್ಟಣ ಶರಣ ಬಂಧು ಬಳಗದ ಸದಸ್ಯ ನಾಗರಾಜ್ ಗಂಟಿ ಹೇಳಿದರು.
ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಬುಧವಾರ ಸಂಜೆ 73 ನೇ ಗಣರಾಜ್ಯೋತ್ಸವ ಅಂಗವಾಗಿ ಸಂವಿಧಾನ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನ ದೇಶದ ಹೆಮ್ಮೆ.
ಮಾನವೀಯ ಮೌಲ್ಯಗಳ ಮಹಾ ಆಗರ, ಸರ್ವ ಧರ್ಮೀಯರ ಶ್ರೇಷ್ಟ ಗ್ರಂಥ ಎಂದು ತಿಳಿಸಿದರು.
ಅನನ್ಯ ಸಾಧಕ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ವಿದ್ವತ್ತು, ಪರಿಶ್ರಮದಿಂದ ವಿಶ್ವದಲ್ಲೇ ಮಾದರಿ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ದೇಶದ ಪ್ರತಿಯೊಬ್ಬ ಪ್ರಜೆ ಘನತೆ, ಗೌರವದಿಂದ ಬದುಕಲು ಅವಕಾಶ ಮಾಡಿಕೊಟ್ಟ ಸಂವಿಧಾನದ ಬಗ್ಗೆ ಕೆಲವರು ಹಗುರವಾಗಿ ಮಾತನಾಡುವುದನ್ನು ಪ್ರತಿಯೊಬ್ಬರು ಖಂಡಿಸಬೇಕು ಎಂದರು.
ಎಲ್ಲರೂ ಒಗ್ಗಟ್ಟಾಗಿ ಸಂವಿಧಾನ ಮೌಲ್ಯಗಳನ್ನು, ಆದರ್ಶಗಳನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.
ಬಳಗದ ಸದಸ್ಯ ಮದ್ದಿ ಹುಲುಗಪ್ಪ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ಪರಮಹಂಸ ಕಲಿಕಾ ಕೇಂದ್ರದ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಡಾ. ಅಂಬೇಡ್ಕರ್ ಅವರ ಕುರಿತಾದ ಜೈ ಭೀಮ್ ಹಾಡುಗಳನ್ನು ಹಾಡಿದರು.
ವಿಶೇಷವೆಂದರೆ ವಿದ್ಯಾರ್ಥಿಗಳು ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವ ಮಹತ್ವದ ಬಗ್ಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾ ಕೇಂದ್ರದ ಮುಖ್ಯಸ್ಥ ಉಮೇಶ್ ಗಂಟಿ ಹಾಗೂ ಕಿನ್ನೂರಿ ರಾಜು ಪುಸ್ತಕಗಳನ್ನು ನೀಡಿದರು.
ಜನಪದ ಕಲಾವಿದರಾದ ಮಾಯಪ್ಪ ಬೆಲ್ಲದ್ದ, ಹುಲಗಪ್ಪ ಮದ್ದಿ, ಲಕ್ಕಣ್ಣ, ಸ್ವಾಮಿ ಗಂಟಿ, ಶರಣಪ್ಪ, ಶಿವರಾಜ್ ಕಿನ್ನುರಿ, ದೇವರಾಜ್ ಗಂಟಿ, ರಮೇಶ್ ಬೆಲ್ಲದ್, ಹಾಗೂ ಹಿರಿಯರಾದ ರಾಮವ್ವ, ಪತ್ರಿ ಈರಮ್ಮ,ಹಾಗೂ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಂತೋಷ್ ಗಂಟೆ ಸ್ವಾಗತಿಸಿದರು. ಹುಲುಗಪ್ಪ ಮದ್ದಿ ನಿರೂಪಿಸಿದು. ಎಸ್ ಎಂ ವಿಠಲ್ ವಂದಿಸಿದರು.
*****