ಅನುದಿನ ಕವನ-೩೯೪, ಕವಿ:ರಘೋತ್ತಮ ಹೊ.ಬ, ಮೈಸೂರು, ಕವನದ ಶೀರ್ಷಿಕೆ: ಜಾತಿ ಇಲ್ಲದ….

ಜಾತಿ ಇಲ್ಲದ…

ಹೊಸ ಜಾಗಕ್ಕೆ ಬಂದೆ
ಹಳೆಯ ಜಾಗದ ಬಗ್ಗೆ
ಪಶ್ಚಾತ್ತಾಪವಿಲ್ಲ
ಜಾತಿ ಇರುವ ಜಾಗ
ಹಳೆಯದಾದರೇನು ಹೊಸದಾದರೇನು
ದೂರದ್ದಾದರೇನು ಹತ್ತಿರದದ್ದಾದರೇನು
ನಮ್ಮೂರೇ ಆದರೆ ಏನು
ಪರ ಊರೇ ಆದರೆ ಏನು

ಜಾತಿ ಹೀನನ ಮನೆಯ
ಜ್ಯೋತಿಯ
ಹುಡುಕುತ ಹೊರಟವಗೆ
ಹಳೆಯದು ಹೊಸದು
ದೂರದ್ದು ಹತ್ತಿರದು
ಭೇದವಿರಲಿಕ್ಕಿಲ್ಲ
ಜಾತಿ ಇಲ್ಲದ ಸ್ಥಿತಿಯೇ ಹೊಸದು
ಜಾತಿ ಇಲ್ಲದ ಜಾಗವೆ ಶ್ರೇಷ್ಠದ್ದು
ಜಾತಿ ವಿಜಾತಿ ಎನ್ನುತ
ಮುಖ ಎತ್ತುವವರು ದುಷ್ಟರು
ಜಾತಿ ಮೀರಿ ಜಾತಿ ತಿಳಿದೂ
ಪ್ರೀತಿಸುವವರು ಶ್ರೇಷ್ಠರು

ಹತ್ತಾರು ವರ್ಷ ಜೊತೆಗಿರುತ್ತೇವೆ
ಜಾತಿ ಕಾರಣಕ್ಕೆ ಮುಖ ಎತ್ತಿ
ಮಾತಾಡಿಸದೆ
ಹಾಗೆ ಬದುಕುತ್ತೇವೆ
ಬದುಕಲ್ಲ ಅದು
ಬಂಡೆಕಲ್ಲುಗಳ ವಾಸ
ನಗುವಲ್ಲ ಅದು
ಕೃತಕ ಹಲ್ಕಿರಿತದ
ಮುಳ್ಳುಗಳ ಸಾವಾಸ

ಜಾತಿ ಇಲ್ಲದ ಮನೆಯ
ಸಾಸಿವೆ ಕಾಳು
ಹುಡುಕಿ ಹೊರಟವಗೆ
ಜಾತಿ ಇಲ್ಲದ ಗೆಳೆಯರ
ಸಾವಾಸ
ಬಯಸುವವಗೆ
ಬದುಕು ಸುಂದರ
ಮನಸ್ಸು ನಿಷ್ಕಲ್ಮಶ

ಜಾತಿ ಇಲ್ಲದ ಸ್ಥಿತಿ
ನಲ್ಲೆಯ ಬಿಸಿ ಮುತ್ತಂತೆ
ತುಟಿ ಕಚ್ಚಿ ಬಿಗಿದ
ಜಗ ಕಾಣದ
ಹಸಿ ಬಿಸಿ ಪ್ರೇಮಿಗಳಂತೆ…

-ರಘೋತ್ತಮ ಹೊ.ಬ, ಮೈಸೂರು
*****