ಯಾಕೆ? ಏನು? ಹೇಗೆ?
ಯಾಕೆ? ಏನು? ಹೇಗೆ?
ಅದಕ್ಕೇ…ಏನಿಲ್ಲ…ಹಾಗೇ….
ಗೊತ್ತಾಗುವುದಿಲ್ಲ ಎಷ್ಟೊಂದು ಆಳ ಅಗಲ
ಅವಕಾಶ , ಆಕಾಶ…..
ತೋರಿಕೆಯ ಮೇಲ್ಪದರದ ಕೆಳಗೆ
ಎಷ್ಟೊಂದು ಪದರಗಳ ಮಡಿಕೆ
ಸುರುಳಿ ಸುತ್ತಿ ಮಲಗಿ ಮಲಗಿದ್ದಲ್ಲಿಯೇ
ಸಡಿಲಗೊಳ್ಳುತ್ತದೆ ಚಡಪಡಿಕೆಗೆ ಹುಡಿ ಮಣ್ಣು
ಅಹಮಿಕೆಗೋ ಅವಮಾನಕ್ಕೋ
ಸಂತಸಕ್ಕೋ ಸಂಕಟಕ್ಕೋ
ಗುರುತಿಸಲಾಗದ ತಳಮಳಕ್ಕೋ
ನಕ್ಕಂತೆ ಬಿಕ್ಕಂತೆ ಮಾತು ಸೋತು ಮೌನವಾದಂತೆ
ಸ್ಪಷ್ಟ ಅಂದಾಜು ಸಿಗದಂತೆ
ಬಿಡೆ ಗುಟ್ಟೆನ್ನುತ್ತಾ ತೆಪ್ಪಗೆ
ಕತ್ತಲೆಯ ಮೂಲೆಯೋ, ನಿರ್ಜನ ತಾವೋ ಹುಡುಕಿ
ರಾಚುವ ಬೆಳಕಿದ್ದರೆ ಕೈ ಅಡ್ಡವಿರಿಸಿ
ರೆಪ್ಪೆ ಮರೆಯಲ್ಲಡಗುತ್ತದೆ
ಒದ್ದೆ ವಸ್ತ್ರದ ಕಣ್ಣು
ಅದಕ್ಕೆ ಎಲ್ಲೆಲ್ಲೋ ಹೇಗ್ಹೇಗೋ
ಮಂಜಾಗುವುದಿಲ್ಲ ದಿನದ ಘಳಿಗೆ
ಗೊತ್ತಾ ನಿನಗೆ?….
ಕಂಬನಿಗೆ ಬಹಳ ನಾಚಿಗೆ.
-ಡಾ. ಕೆ. ಎನ್.ಲಾವಣ್ಯ ಪ್ರಭ, ಮೈಸೂರು
*****