ಎಲ್ಲಿ ಹೋದರು ನಮ್ಮ ಪ್ರಕಾಶ್!
ದಿಕ್ಕು ದಿಕ್ಕುಗಳಲ್ಲಿ ಸೊಕ್ಕು ಅಡರುತ್ತಿದೆ
ಮಿಕ್ಕ ಸತ್ಯದ ಪಕ್ಕೆಲುಬು ಮುರಿಯುತಿದೆ
ಇತ್ತಲೆ ಇದ್ದು ಅದನ್ನೆತ್ತದೆ
ಎತ್ತ ಹೋದೆ ನೀ ಪ್ರಕಾಶ ಇತ್ತ ಬಾ !! ದಿಕ್ಕು ದಿಕ್ಕು!!
ಸತ್ತು ಹೋದ ಬರಡು ಭೂಮಿಯಲ್ಲಿ ಉತ್ತಿ-ಬಿತ್ತಿದ ಹೂವ ಚಿಗುರಿಸಿದೆ
ಎತ್ತಿರುವ ಪರಿಮಳವ ಆಸ್ವಾದಿಸದೇ
ಎತ್ತ ಹೋದೆ ನೀ ಪ್ರಕಾಶ ಇತ್ತ ಬಾ!! ದಿಕ್ಕು ದಿಕ್ಕುಗಳಲ್ಲಿ!!
ಕತ್ತು ನೊಯ್ದರೂ ಹೊತ್ತೆ ನೀನಿಲ್ಲಿ
ಹೂತು ಹೋದ ಆಸೆಗಳ ಅರಳಿಸಿದೆ
ಮುತ್ತಿನ ಹೊನಲು ಬರುತಿರೆ
ನೋಡಿ ನಗುವುದ ಬಿಟ್ಟು
ಎತ್ತ ಹೋದೆ ನೀ ಪ್ರಕಾಶ ಇತ್ತ ಬಾ.!! ದಿಕ್ಕು ದಿಕ್ಕುಗಳಲ್ಲಿ!!
ರಸ್ತೆ, ಮನೆ, ಮಠ, ಮಸೂತಿ
ಮತ್ತೆ ನಿನ್ನ ಆ ರಂಗಭಾರತಿ
ಹೊತ್ತು ಹೊತ್ತಿಗೂ ನಿನ್ನನೇ ನೆನಪಿಸುತಿರೆ
ಎತ್ತ ಹೋದೆ ನೀ ಪ್ರಕಾಶ ಇತ್ತ ಬಾ.!! ದಿಕ್ಕು ದಿಕ್ಕುಗಳಲ್ಲಿ!!
ನಿತ್ಯ ಹೊಲಸು ರಾಜಕೀಯದಲಿ
ಸತ್ಯ ಕುಸುಮ ನೀನಾಗಿದ್ದೆ
ಸಹ್ಯ ಮಾಡುವುದ ಬಿಟ್ಟು
ಎತ್ತ ಹೋದೆ ನೀ ಪ್ರಕಾಶ ಇತ್ತ ಬಾ.!! ದಿಕ್ಕು ದಿಕ್ಕುಗಳಲ್ಲಿ!!
ಬಣ್ಣ ಹಚ್ಚಿ ನಾಟ್ಯ ಮಾಡಿದೆ
ಕಣ್ಣು ಕಣ್ಣಲಿ ಬಣ್ಣದ ಆಸೆ ಮೂಡಿಸಿದೆ
ನಿನ್ನ ಹೊರತು ದಿಕ್ಕಿಲ್ಲ ಎಂದು ಗೊತ್ತಿದ್ದೂ
ಎತ್ತ ಹೋದೆ ನೀ ಪ್ರಕಾಶ ಇತ್ತ ಬಾ.!! ದಿಕ್ಕು ದಿಕ್ಕುಗಳಲ್ಲಿ!!
ಅತ್ತು ಕರೆಯುತಿಹಳು ಭೂಮಿ
ಅತ್ತ ಮೊರೆಯುತಿಹಳು ಭಾನು
ಮತ್ತೆ ಆವಿರ್ಭವಿಸಿ ಬರುವುದ ಬಿಟ್ಟು
ಎತ್ತ ಹೋದೆ ನೀ ಪ್ರಕಾಶ ಇತ್ತ ಬಾ.
!! ದಿಕ್ಕು ದಿಕ್ಕುಗಳಲ್ಲಿ!!
-ಯಲ್ಲಪ್ಪ ಹಂದ್ರಾಳ ಮುಖ್ಯೋಪಾಧ್ಯಾಯರು, ಸರಕಾರಿ ಪ್ರೌಢಶಾಲೆ, ದೇವದುರ್ಗ
(ಕಾವ್ಯಗಳಲ್ಲಿ ಎಂ.ಪಿ.ಪ್ರಕಾಶ್ ಕೃತಿಯಲ್ಲಿ ಪ್ರಕಟಿತ ಕವನ)
*****