ಕೊಪ್ಪಳ ಮೂಲದ, ಹೊಸಪೇಟೆಯಲ್ಲಿ ಹುಟ್ಟಿ ಬೆಳೆದ ರಮೇಶ ಕಂಟ್ಲಿ ಅವರು
ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಕ್ರಮವಾಗಿ
ಹೊಸಪೇಟೆಯ ಡಾ. ಅಂಬೇಡ್ಕರ್ ಸರಕಾರಿ ಪ್ರಾಥಮಿಕ ಶಾಲೆ, ಸರಕಾರಿ ಸರ್ದಾರ್ ವಲ್ಲಭಾಯ್ ಪಟೇಲ್ ಪ್ರೌಢ ಶಾಲೆ ಹಾಗೂ ಪ್ರತಿಷ್ಠಿತ ವಿಜಯನಗರ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದಿದ್ದಾರೆ.
ಪ್ರಸ್ತುತ ತೋರಣಗಲ್ಲು ಬಳಿ ಇರುವ ಜಿಂದಾಲ್ ಉಕ್ಕು ಕಾರ್ಖಾನೆಯ (JSW Steel Ltd.) ಕಾಮರ್ಸ್ ಸ್ಟೋರ್ ವಿಭಾಗದ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಬರೀ ಲೆಕ್ಕ ಪತ್ರಗಳಲ್ಲಿ ಮುಳುಗಿ ಹೋಗದೇ ಸಾಹಿತ್ಯ ಓದು, ಬರಹದಲ್ಲಿ ನೆಮ್ಮದಿ ಕಾಣುತ್ತಿದ್ದಾರೆ.
ಗೌರೀಶ ಕಾವ್ಯನಾಮದಲ್ಲಿ ಕವನ ರಚಿಸುತ್ತಿರುವ ರಮೇಶನ ಕವಿತೆಗಳು ಕಾವ್ಯ ಪ್ರಿಯರ ಮನ ಗೆಲ್ಲುತ್ತಿವೆ.
ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಆಟ ಕವಿತೆ ಪಾತ್ರವಾಗಿದೆ. 👇
ಆಟ
ಜೀವನವೊಂದು ಹೋರಾಟ
ಇರುವುದು ಹಾವು ಏಣಿಯಾಟ
ಯಾರಿಗಿಲ್ಲ ಪರದಾಟ.
ಸಂಸಾರವೊಂದು ಜಂಜಾಟ
ಅತ್ತೆ ಸೊಸೆಯರ ಕಾದಾಟ
ಗಂಡಸರ ತೊಳಲಾಟ.
ಕಂಡದ್ದೆಲ್ಲ ಬೇಕೆನ್ನುವ ಹಠ
ಆಸ್ತಿಗಾಗಿ ಬಡಿದಾಟ
ಎಲ್ಲಿದೆ ಸಮಾನತೆಯ ನೋಟ.
ಶ್ರೀಮಂತರ ವರ್ಗದವರ
ಮೋಜಿನಾಟ
ಮಧ್ಯಮ ವರ್ಗದವರ ಹೊಯ್ದಾಟ
ಬಡ ವರ್ಗದವರ ಗೋಳಾಟ.
ಮಕ್ಕಳ ಹುಡುಗಾಟ
ಹೆತ್ತವರ ಪೀಕಲಾಟ
ಇವರಿಗಿಲ್ಲ ಸಂಸ್ಕಾರದ ಪಾಠ.
ಮಕ್ಕಳ ಗುರಿಯಿಲ್ಲದ ಓಟ
ಬರೀ ಶ್ರೇಣಿಯೆಡೆಗೆ ನೋಟ
ಅರಿಯರು ಜೀವನದ ಪಾಠ.
ಕಾಣೆಯಾಗಿದೆ ಗೋಲಿ
ಬುಗುರಿಯಾಟ
ಜೋರಾಗಿದೆ ಮೊಬೈಲಾಟ
ವಿರಳವಾಗಿದೆ ದೈಹಿಕದಾಟ.
ಕಾಣಸಿಗದು ಲಗೋರಿಯಾಟ
ಬರೀ ಬ್ಯಾಟು ಚೆಂಡಿನಾಟ
ನೆಡೆಯುವುದು ಜೂಜಾಟ.
ಮರೆಯಾಗಿದೆ ಬಯಲಾಟ
ಧಾರಾವಾಹಿಗಳ ಎಳೆದಾಟ
ಶುರುವಾಗಿದೆ ವೆಬ್ ಸೀರಿಸ್ ಆಟ.
ಹದಿ ಹರೆಯದವರ ಪ್ರೇಮದಾಟ
ದಾರಿ ತಪ್ಪಿ ವ್ಯಸನದಾಟ
ಇವರಿಗಿಲ್ಲ ನೀತಿಯ ಪಾಠ.
ಗಂಡಸರ ಚಟ
ಹೆಂಗಸರ ಹಠ
ಸಂಸಾರ ಸೂತ್ರವಿರದ ಗಾಳಿಪಟ.
ಜಾತಿ ಜಾತಿಗಳ ಮೇಲಾಟ
ಧರ್ಮ ಧರ್ಮಗಳ ಕಾದಾಟ
ಇದಕೆಂದು ಅಂತಿಮದಾಟ.
ರಾಜಕಾರಣಿಗಳ ನಾಟಕದಾಟ
ಹಾಕುವರು ಬಾಡೂಟ
ಮರೆಯುವರು ಅಭಿವೃದ್ಧಿಯ ಓಟ.
ಮಾಧ್ಯಮಗಳ ಚೀರಾಟ
ತಿರುಗಿ ತಿರುಗಿ ತೋರಿಸುವ ಚಟ
ಬರೀ ಟಿ ಆರ್ ಪಿ ಯ ನೋಟ.
ದೊಡ್ಡ ದೊಡ್ಡ ದೇಶಗಳ ಮೇಲಾಟ
ವಿಸ್ತಾರವಾದದ ಕಾಟ
ಎಲ್ಲಿದೆ ಮಾನವೀಯತೆಯ ನೋಟ.
ಮರೆಯಬೇಕು ಅಹಂಕಾರದಾಟ
ಅರಿಯಬೇಕು ಸಹನೆಯ ಪಾಠ
ಆಗ ಬಾಳೊಂದು ಸುಂದರ ತೋಟ.
. —ಗೌರೀಶ (ರಮೇಶ ಕಂಟ್ಲಿ), ಹೊಸಪೇಟೆ
*****