ಅನುದಿನ ಕವನ-೪೧೭, ಕವಯಿತ್ರಿ : ಡಾ.ನಿರ್ಮಲಾ ಬಟ್ಟಲ್, ಬೆಳಗಾವಿ, ಕವನದ ಶೀರ್ಷಿಕೆ: ಮಾತೆ ಕಲಿಸಿದ ಮಮತೆಯ ಭಾಷೆ”

ಕವಯತ್ರಿ ಕಿರು ಪರಿಚಯ:
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.,(ಕನ್ನಡ), ಎಂ.ಎಡ್., ಮತ್ತು ಪಿಎಚ್.ಡಿ(ಶಿಕ್ಷಣ).,; ಮೈಸೂರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ.,(ಇತಿಹಾಸ) ಮತ್ತು ಪಿ.ಜಿ.ಡಿ.ಎಚ್.ಇ.,(ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮಾ ಇನ್ ಹೈಯರ್ ಎಜ್ಯುಕೇಶನ್); ಬೆಳಗಾವಿ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಯದಿಂದ ಪಿ.ಜಿ.ಡಿ.ವೈ.ಎಸ್., (ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮಾ ಇನ್ ಯೋಗ ಸ್ಟಡೀಸ್)-ಹೀಗೇ ಅನೇಕ ಸ್ನಾತಕೋತ್ತರ ಮತ್ತು ಸಂಶೋಧನಾ ಪದವಿಗಳನ್ನು ಪಡೆದು, ಎಸ್.ಎಲ್.ಇ.ಟಿ.,ರಾಜ್ಯ ಉಪನ್ಯಾಸಕರ ಪ್ರವೇಶ ಪರೀಕ್ಷೆಯನ್ನೂ ಪೂರೈಸಿರುವ ಡಾ.ನಿರ್ಮಲಾ ಬಟ್ಟಲ್ ಅವರು ಅಧ್ಯಾಪಕರಾಗಿ, ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಪ್ರಸ್ತುತ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಪಾರ ಬೋಧನಾನುಭವ, ಸಂಶೋಧನಾನುಭವ ಹೊಂದಿರುವ ಡಾ.ನಿರ್ಮಲಾ ಬಟ್ಟಲ್, 15-ರಾಷ್ಟ್ರೀಯ, 5-ಅಂತರರಾಷ್ಟ್ರೀಯ ಶೈಕ್ಷಣಿಕ ವಿಚಾರ ಸಂಕಿರಣಗಳಲ್ಲಿ 17-ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ, ಕಮ್ಮಟಗಳಲ್ಲಿ ಭಾಗವಹಿಸಿ ವಿದ್ವತ್ಫೂರ್ಣ ಪ್ರಬಂಧಗಳನ್ನು ಮಂಡಿಸಿದ್ದಾರೆ. ಬಾಲ್ಯದಿಂದಲೂ ಬರವಣಿಗೆಯ ಅಭಿರುಚಿಯುಳ್ಳ ಡಾ.ನಿರ್ಮಲಾ ಬಟ್ಟಲ್ ಅವರ ಹಲವಾರು ಕತೆ, ಕವನ, ಲೇಖನಗಳು ನಾಡಿನ ಪ್ರತಿಷ್ಠಿತ ದೈನಿಕ, ಸಾಪ್ತಾಹಿಕ, ಮಾಸಿಕಗಳಲ್ಲಿ ಪ್ರಕಟವಾಗಿವೆ. 2005ರಲ್ಲಿ ಸಂಯುಕ್ತ ಕರ್ನಾಟಕ ಏರ್ಪಡಿಸಿದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಸುವರ್ಣ ವಾಹಿನಿ ಲೇಡೀಸ್ ಕ್ಲಬ್ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಬೆಳವಡಿ ಉತ್ಸವ, ಕಿತ್ತೂರು ಉತ್ಸವಗಳಲ್ಲಿ ವಿಶೇಷ ಉಪನ್ಯಾಸ ನೀಡಿದ್ದಾರೆ. ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ “ಬೆಳಕಿನ ಕನ್ನಡಿ” ಚಲನ ಚಿತ್ರದಲ್ಲಿ ಅತಿಥಿ ನಟಿಯಾಗಿ ಅಭಿನಯಿಸಿದ್ದಾರೆ. 2018 ರಲ್ಲಿ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದಿಂದ ಎಂ.ಜಿ.ಘಿವಾರಿ ಸಾಹಿತ್ಯ ಪ್ರಶಸ್ತಿಪಡೆದಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಹಾನಗರ ಪಾಲಿಕೆಯ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾಗಿ ರಾಜ್ಯ ಸರ್ಕಾರದಿಂದ ನೇಮಕಗೊಂಡಿದ್ದಾರೆ.

“ವಿಶ್ವ ಮಾತೃಭಾಷಾ ದಿನ”ದ ಅಂಗವಾಗಿ ಡಾ.ನಿರ್ಮಲಾ ಬಟ್ಟಲ್ ಅವರ ‘ಮಾತೆ ಕಲಿಸಿದ ಮಮತೆಯ ಭಾಷೆ’ ಕವಿತೆ ಇಂದಿನ ಅನುದಿನ ಕವನದ ಗೌರವಕ್ಕೆ ಪಾತ್ರವಾಗಿದೆ.👇

ಮಾತೆ ಕಲಿಸಿದ ಮಮತೆಯ ಭಾಷೆ

ಮಾತೆ ಕಲಿಸಿದ
ಮಮತೆಯ ಭಾಷೆ
ಅಪ್ಪ ಕಲಿಸಿದ
ಅಭಿಮಾನದ ಭಾಷೆ
ಅಕ್ಕ ಕಲಿಸಿದ
ಅಕ್ಕರೆಯ ಭಾಷೆ
ಅಣ್ಣ ಕಲಿಸಿದ
ಸಕ್ಕರೆಯ ಭಾಷೆ
ನಲ್ಲ ಕಲಿಸಿದ
ನಲ್ಮೆಯ ಭಾಷೆ
ಗುರು ಕಲಿಸಿದ
ಜ್ಞಾನದ ಭಾಷೆ
ವಿದ್ಯೆ ಕಲಿಸಿದ
ವಿನಯದ ಭಾಷೆ
ಕಣ್ಮನ ತುಂಬಿದ
ಒಲ್ಮೆಯ ಭಾಷೆ
ಕರ್ಣಾನಂದಕರ
ಕರುಣೆಯ ಭಾಷೆ
ಮೆಚ್ಚೆ ಮರೆಯೆನು
ಅನ್ಯ ಭಾಷೆ
ಬದುಕು ಬೆಳಗಿದ
ಅನ್ನದ ಭಾಷೆ
ಭಾವಬುತ್ತಿಯ
ಅನುರಾಗದ ಭಾಷೆ
ಕಪ್ಪು ನೆಲದ
ಕನ್ನಡ ಭಾಷೆ
ಅಪ್ಪಿ ನುಡಿಯುವೆ
ಕನ್ನಡ ಭಾಷೆ

-ಡಾ.ನಿರ್ಮಲಾ ಬಟ್ಟಲ್, ಪ್ರಾಚಾರ್ಯರು,    ಮಹಾಂತೇಶನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ, ಬೆಳಗಾವಿ,

*****