ಅನುದಿನ‌ ಕವನ – 419, ಕವಯತ್ರಿ: ವಿನುತಾ. ಎಸ್

ಬೆಳದಿಂಗಳನ್ನು ಆಸ್ವಾದಿಸಿದರಷ್ಟೇ ಸಾಕೇ,
ಚಂದಿರನ ಕಲೆಗಳನ್ನೂ ಅಷ್ಟೇ ನಲ್ಮೆಯಿಂದ
ಒಪ್ಪಿಕೊಳ್ಳುವುದೇ ಪ್ರೀತಿ..!!

ಸಿಗುತ್ತದೆಯೆಂಬ ಖಾತ್ರಿಯಿದ್ದರಷ್ಟೇ ಹುಟ್ಟುವುದು ಪ್ರೀತಿಯಾ?!
ಕೈಗೆಟುಕದ ಚಂದಿರನನ್ನೂ ಪ್ರೀತಿಸುವುದರ ಬಗ್ಗೆ ಜಗತ್ತಿಗೆ ಹೇಗೆ ಹೇಳಲಿ..!!

ಸಿಗಲೇಬೇಕೆಂಬುದು, ತನಗಷ್ಟೇ ಸ್ವಂತ ಎನ್ನುವುದೂ ಸ್ವಾರ್ಥ,
ಅಷ್ಟಗಲ ಆಗಸದಲ್ಲಿ ರಾಶಿ ಚುಕ್ಕೆಗಳಲ್ಲಿ ಚಂದಿರ ಯಾರ ಸ್ವಂತ??

ಎಲ್ಲ ಕೊರತೆಗಳೊಟ್ಟಿಗೆ ಒಪ್ಪಿ ಅಪ್ಪಿಬಿಡುವುದೇ ಪ್ರೀತಿ,
ಚಂದಿರನಲ್ಲಿ ಕಲೆಗಳಿವೆ ನಿಜ, ಬೆಳದಿಂಗಳಲ್ಲಿ ಲೋಪ ಹುಡುಕಲಾದೀತೇ!?

ಚಂದಿರನೆಂದರೆ ಅಷ್ಟು ತಾರೆಗಳ ಸಖನಷ್ಟೇ ಅಲ್ಲ,
ಅಮ್ಮ ತುತ್ತಿಡುವಾಗೆಲ್ಲ ಎಷ್ಟೊಂದು ಕೂಸುಗಳ ಮುದ್ದು ಮಾಮ!!

ಚಂದಿರನಿಗೂ ನನಗೂ ಅದೇನೋ ನಂಟು,
ನಿರ್ಲಿಪ್ತವಾಗಿ ಸೂರು ದಿಟ್ಟಿಸುವಾಗೆಲ್ಲಾ ಒಬ್ಬಂಟಿ ಚಂದಿರ ಅದೆಷ್ಟೊಂದು ಸಾಂತ್ವನ!!

-ವಿನುತಾ ಎಸ್ ✍️
*****