ಗಜ಼ಲ್
ದ್ವೇಷ ಕಕ್ಕಬೇಡಿ ಧರ್ಮದ ಹೆಸರಲ್ಲಿ ರಕ್ತದ ಬಣ್ಣವದು ಒಂದೇ ಇದೆ
ಮನಸು ಮುರಿಯಬೇಡಿ ವಿಷಭಾವ ಬಿತ್ತಿ ಬದುಕಲು ನೆಲವದು ಒಂದೇ ಇದೆ
ಯಾಕೆ ಬಟ್ಟೆ ಬಣ್ಣಗಳ ಮುಂದು ಮಾಡಿ ಜೀವಗಳ ಜೊತೆ ಚೆಲ್ಲಾಟವಾಡುತ್ತೀರಿ
ಗೋಡೆ ಕಟ್ಟಬೇಡಿ ಗಾಯಗಳ ನಡುವೆ ತೃಷೆಗೆ ಜಲವದು ಒಂದೇ ಇದೆ
ಭಾವಗಳು ಬೆರೆತರಷ್ಟೇ ಭಿನ್ನತೆ ಕಳೆದು ಭಾವೈಕ್ಯತೆ ಬೆಳೆಯಲು ಸಾಧ್ಯ
ಚಿವುಟಬೇಡಿ ಎಳೆಯ ಚಿಗುರಗಳ ಕನಸು ಸುರಿವ ಕಣ್ಣೀರ ರುಚಿಯದು ಒಂದೇ ಇದೆ
ಮನುಷ್ಯ ಪ್ರೀತಿಯ ಒಲುಮೆ ದಾಟಿಸಬೇಕಿದೆ ಅನವರತ ಎದೆಯಿಂದಲೆದೆಗೆ
ಬೆಂಕಿ ಹಚ್ಚಬೇಡಿ ಕೂಡಿ ಬಾಳುವ ಬಾಂಧವ್ಯಕ್ಕೆ ಕೊನೆಯ ಪಯಣವದು ಒಂದೇ ಇದೆ
ಒಳನೋವುಗಳಿಗೆ ಮುಲಾಮು ಹಚ್ಚಿಕೊಂಡು ಲೋಕದ ಕನ್ನಡಿ ಮುಂದೆ ನಗು ಹಂಚುತ್ತಿದ್ದಾನೆ ‘ನಾಗೇಶಿ’
ತಬ್ಬಲಿ ತೋಳುಗಳು ಜೀವ ಕರುಣೆಯಿಂದ ಕಣ್ಣ ಮುಂದಿನ ಬೆಳಕದು ಒಂದೇ ಇದೆ
-ನಾಗೇಶ್ ಜೆ. ನಾಯಕ, ಸವದತ್ತಿ
*****