ಹಂಪಿ ಕನ್ನಡ ವಿವಿಯಲ್ಲಿ ವಚನ ಅಧ್ಯಯನ ಪೀಠ ಸ್ಥಾಪಿಸಲು ಬಸವಪರ ಸಂಘಟನೆಗಳ ಮನವಿ

ವಿಜಯನಗರ(ಹೊಸಪೇಟೆ), ಮಾ.3: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಚನ ಅಧ್ಯಯನ ಪೀಠ ಸ್ಥಾಪಿಸಲು ಕುಲಪತಿ ಸ ಚಿ ರಮೇಶ್‌ ಅವರಿಗೆ ಸಂಡೂರಿನ ಪ್ರಭುಸ್ವಾಮಿಗಳ ವಿರಕ್ತಮಠದ ಪ್ರಭುಸ್ವಾಮಿಗಳ ನೇತೃತ್ವದಲ್ಲಿ ಮನವಿಸಲ್ಲಿಸಲಾಯಿತು . ಕನ್ನಡ ವಿ ವಿ ಯ ಕುಲಪತಿಗಳ ಕಛೇರಿಯಲ್ಲಿ ಈಚೆಗೆ ಭೇಟಿಮಾಡಿದ ಬಸವಪರ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.
ಸ್ವಾಮೀಜಿಯವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಪೀಠದ ಬೇಡಿಕೆ ಸಲ್ಲಿಸಿದಾಗ ಅವರು ಮೌಖಿಕ ಒಪ್ಪಿಗೆ ಸೂಚಿಸಿ ಈ ಸಲದ ಬಜೆಟ್‌ನಲ್ಲಿ ಘೋಷಣೆ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಗಣ್ಯರು ಕುಲಪತಿಗೆ ಮನವರಿಕೆ ಮಾಡಿದರು.
ವಿಜಯನಗರದ ಪರಿಸರದಲ್ಲಿ ಪ್ರೌಢದೇವರಾಯನ ರಾಜಾಶ್ರಯದಲ್ಲಿ ವಚನ ಸಾಹಿತ್ಯ ಪುನಶ್ಚೇತನ ಕಂಡಿದೆ. ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಜೀವಾಳ. ಜಾಗತಿಕ ಮಟ್ಟದಲ್ಲಿ ವಚನ ಸಾಹಿತ್ಯದ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಅನ್ಯ ದೇಶಗಳ ಹದಿನೆಂಟು ಭಾಷೆಗಳಿಗೆ ಹನ್ನೆರಡನೇ ಶತಮಾನದ ವಚನಗಳು ಅನುವಾದಗೊಂಡಿವೆ ಎಂದರು.
ಜಗತ್ತಿನ ಮೊದಲ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಜಾರಿಗೊಳಿಸಿ ಅನುಭವ ಮಂಟಪ ಎಂಬ ಸಂಸತ್ತು ಸ್ಥಾಪಿಸಿದವರು ವಚನಕಾರ ಶರಣರು. ಮಾನವೀಯ ಎಲ್ಲಾ ಮೌಲ್ಯಗಳನ್ನು ಒಳಗೊಂಡ ವಚನ ಸಾಹಿತ್ಯದ ಅಧ್ಯಯನಕ್ಕೆ ಪ್ರತೇಕ ಪೀಠದ ಅವಶ್ಯಕತೆಯನ್ನು ಮನಗಂಡು ಕ್ರಮ ವಹಿಸಲು ಸ್ವಾಮೀಜಿ ಕುಲಪತಿಗಳಿಗೆ ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕಲಪತಿಗಳು ಒಂದು ವರ್ಷದ ಹಿಂದೆಯೇ ಸಂಸದ ದೇವೇಂದ್ರಪ್ಪ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಪಕರೊಂದಿಗೆ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಮಾಡಿ ಮನವಿಸಲ್ಲಿಸಿದಾಗ ಅವರು ಈ ಕುರಿತು ತಾತ್ವಿಕ ಒಪ್ಪಿಗೆ ಸೂಚಿಸಿದ್ದರು. ಕರೋನಾದ ಕಾರಣಕ್ಕೆ ಈ ಕಾರ್ಯಕ್ಕೆ ಚಾಲನೆ ಸಿಗಲಿಲ್ಲ. ತಮ್ಮ ಅವಧಿಯಲ್ಲಿ ವಚನ ಅಧ್ಯಯನ ಕೇಂದ್ರದ ಸ್ಥಾಪನೆಯ ಕುರಿತು ಆದ್ಯತೆ ನೀಡುತ್ತೇನೆ ಎಂದರು. .ತಾವು ಸರ್ವಸಮಾನತೆಯನ್ನು ಸಾರಿದ ಶಿವಶರಣ ವಚನಕಾರರ ದೊಡ್ಡ ಅಭಿಮಾನಿ. ಇಂತಹ ಕೇಂದ್ರ ನನ್ನ ಅವಧಿಯಲ್ಲಿ ಸ್ಥಾಪನೆಯಾದರೆ ಕುಲಪತಿಯಾಗಿ ನನ್ನ ಬದುಕು ಸಾರ್ಥಕ ಎಂದೇ ಭಾವಿಸುತ್ತೇನೆ ಎಂದು ವನಮ್ರವಾಗಿ ನುಡಿದರು.
ಈ ಸಂದರ್ಭದಲ್ಲಿ ಬಸವಪರ ಸಂಘಟನೆಯ ಸದಸ್ಯರು , ಜನಪ್ರತಿನಿಧಿಗಳು ಮತ್ತು ಕನ್ನಡ ವಿ ವಿ ಯ ಹಿರಿಯ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
*****