ಕುಲಕ್ಕೆ ಹೊರಗಿನವರು
ನೀರು ನೆತ್ತರು
ಬೆವರು ಕಣ್ಣೀರು
ಒಂದೇ ಬಣ್ಣದಂತಿದೆ;
ಗಂಡು ಹೆಣ್ಣು
ಜಾತಿ ಹುಣ್ಣು
ಒಟ್ಟಿಗೆ ಸೆರೆಯಾದಂತಿದೆ…
ಸಾವಿನ ಕೌಸು ವಾಸನೆಯೊಳು
ಕೂಸು ಹುಟ್ಟಿದಂತಿದೆ
ಕಿಲುಬು ಕಾಸಿನೊಳು
ಶಿಲುಬೆಗಳ ಸಿಂಗರಿಸಿದಂತಿದೆ…
ಕೊಂಬೆಗಳ ಸಿಬಿರಿಂದ
ಬೇರುಗಳಾ ಎರೆದಂತೆ
ರೆಕ್ಕೆಗಳಾ ಮೊನಚಿಂದ
ಹಕ್ಕಿಗಳ ಇರಿದಂತೆ….
ಮುಟ್ಟಲೊಲ್ಲದವರು ಮುಟ್ಟುತ್ತಿರೆ
ನೀರಬೊಬ್ಬೆಗಳು ಹಬೆಯಾಡಿದಂತಿದೆ.
ನಾಲಗೆ ಬಲಕ್ಕೆ ಹೊರಳಿದರೆ
ಯುದ್ಧ ಎನ್ನುವಿರಿ
ಎಡಕ್ಕೆ ಹೊರಳಿದರೆ
ಶುದ್ಧ ಎನ್ನುವಿರಿ
ಒಮ್ಮೆ ರಕ್ತ ಎನ್ನುವಿರಿ
ಮಗದೊಮ್ಮೆ ಪರಿತ್ಯಕ್ತ ಎನ್ನುವಿರಿ…
ಮೂರಗಲ ಜಾಗ ಕೊಡಿರೆಂದು ಬರುವಿರಿ
ಜಗದಗಲ ಪಾದವೂರಿ ಬಿಲಿಗೈಯುವಿರಿ.
ಮೆಟ್ಟು ಹೊಲೆದು ಕೊಟ್ಟೇವು
ಬೆಟ್ಟು ಮುರಿದು ಕೊಟ್ಟೇವು
ನಮ್ಮೆದೆಗೆ ನೆಟ್ಟ ಬಾಣಗಳಿಂದ
ಹೂ ಬಿಡಿಸಿ ಕೊಟ್ಟೇವು…
ನಿಮ್ಮ ರಣಕಣಗಳಲ್ಲೊಂದಿಷ್ಟು
ತಾವು ಪಡೆದು
ಒಲವ ಬಿತ್ತಿ ಒಲುಮೆ ಬೆಳೆದೇವು…
ನಮ್ಮ ಬೆವರ ಬುತ್ತಿಗೆ
ಕೈಯೊಡ್ಡುವವರು ನೀವು
ನಿಮಗೆ ತುತ್ತೀಯದೆ
ಉಣಿವುದಿಲ್ಲ ನಾವು.
-ಎಸ್. ಮಂಜುನಾಥ
ಬೆಂಗಳೂರು
*****
Excellent super