ಅನುದಿನ ಕವನ-೪೨೮, ಕವಿ: ಬೋರೇಗೌಡ, ಅರಸೀಕೆರೆ, ಕವನದ ಶೀರ್ಷಿಕೆ: ಮುಸ್ಸಂಜೆ ಬದುಕು

ಮುಸ್ಸಂಜೆ ಬದುಕು

ಹರೆಯದ ಬದುಕಲಿ
ಮಕ್ಕಳ ಸಿರಿಯಲಿ
ಸತಿಪತಿ ಜೊತೆಯಲಿ ದುಡಿಯುತ್ತ
ಬಡತನ ಸಹಿಸುತ
ಬವಣೆಯ ಪಡುತಲಿ
ಮುದ್ದಿನ ಮಕ್ಕಳ ಓದಿಸುತ

ಹಗಲಿರುಳೆನ್ನದೆ
ಬೆವರನು ಹರಿಸುತ
ಮಕ್ಕಳ ಬದುಕಿಗೆ ಹೆಣಗಿಹರು
ಉನ್ನತ ಓದಿಗೆ
ಮಮ್ಮಲ ಮರುಗುತ
ಬ್ಯಾಂಕಲಿ ಸಾಲವ ಮಾಡಿಹರು

ಓದನು ಮುಗಿಸಿದ
ಮಕ್ಕಳ ಬವಣೆಯ
ನೋಡುತ ಮರುಕವ ಪಡುತಿಹರು
ತಮ್ಮಯ ಪಾಲಿನ
ಆಸ್ತಿಯ ಮಾರಲು
ಸತಪತಿಯಿಬ್ಬರು ಒಪ್ಪಿಹರು

ಆಸ್ತಿಯ ಕಳೆಯುತ
ಕೆಲಸವ ಕೊಡಿಸಲು
ಮಕ್ಕಳು ದೇಶವ ಬಿಟ್ಟಿಹರು
ಮುಪ್ಪಿನ ಅಪ್ಪನ
ಅಮ್ಮನ ಸುಖವನು
ನೋಡಲು ಒಬ್ಬರು ಸಿಗದಿಹರು

ಹರೆಯದ ಬದುಕಲಿ
ಮಕ್ಕಳ ಬದುಕಿಗೆ
ಹೆಣಗಿದ ಜನ(ಕ)ನಿ ಕಥೆಯಿದುವೆ
ಮುಸ್ಸಂಜೆ ಬದುಕಿಗೆ
ಆಸರೆ ಯಿಲ್ಲದೆ
ಕೊರಗುತ ಪ್ರಾಣವ ತೊರೆದಿಹರು

-ಬೋರೇಗೌಡ, ಅರಸೀಕೆರೆ