ಗಜ಼ಲ್
ಹಾಡಲಾರದ ಹಕ್ಕಿಗಳೂ ಕಿರೀಟ ಹೊತ್ತು ಮೆರೆಯುತ್ತಿವೆ ಅದೇನು ಸೋಜಿಗ
ಕುಣಿಯಲಾರದ ನವಿಲುಗಳೂ ನಟನೆಯ ಸೋಗು ಹಾಕುತ್ತಿವೆ ಅದೇನು ಸೋಜಿಗ
ಸ್ವಂತಿಕೆಗೆ ಇಲ್ಲದ ನಿಯತ್ತು ಬಾಲ ಬಡುಕರ ಬೆನ್ನು ಹತ್ತಿ ವಿಜೃಂಭಿಸಿದೆ
ಎಂಜಲನ್ನೇ ಉಂಡ ಬಾಯಿಗಳೂ ಪ್ರಸಾದವೆಂಬಂತೆ ಬಡಾಯಿ ಕೊಚ್ಚುತ್ತಿವೆ ಅದೇನು ಸೋಜಿಗ
ಬಹುಪರಾಕಿನ ಉದ್ಗಾರದ ಮುಂದೆ ರಾಜಮಹಲುಗಳೇ ಉದುರಿ ಹೋದವು
ಉಳಿ ಪೆಟ್ಟು ತಿನ್ನದ ಶಿಲೆಗಳೂ ದೇವರಾಗುವ ಕನಸು ಕಾಣುತ್ತಿವೆ ಅದೇನು ಸೋಜಿಗ
ಕಾಲಿಗೆ ಮೂಗು ತಿಕ್ಕಿ ಪಾದದ ಧೂಳಿಗೆ ಹಣೆಯೊಡ್ಡುವವರದೇ ಮೆರವಣಿಗೆ ಈಗೀಗ
ಘಮ ಬೀರದ ಗಿಲೀಟು ಹೂವುಗಳೂ ಕೊರಳೇರಿ ನಗುತ್ತಿವೆ ಅದೇನು ಸೋಜಿಗ
ಪಲ್ಲಕ್ಕಿ ಹೊತ್ತ ಹೆಗಲು ಜೈಕಾರ ಹಾಕುವ ದನಿ ಅದೆಷ್ಟು ದಿನ ಹೇಳು ‘ನಾಗೇಶಿ’
ಬದುಕಿನ ಸತ್ಯ ಅರಿಯದ ಬಾತುಕೋಳಿಗಳೂ ಭ್ರಮೆಯಲ್ಲಿ ಬೀಗುತ್ತಿವೆ ಅದೇನು ಸೋಜಿಗ
-ನಾಗೇಶ್ ಜೆ. ನಾಯಕ, ಸವದತ್ತಿ
*****