ಹೊಸಪೇಟೆ, ಮಾ. 11: ಪಾದಾರ್ಪಣೆ ಮಾಡಿದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ಮೊದಲ ಎಸೆತಕ್ಕೆ ಸಿಕ್ಸರ್ ಎತ್ತಿದಂತೆ, ಶತಕ ಬಾರಿಸಿದಂತೆ ನಗರದ ಶ್ರೀ ಶಂಕರ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತಾವಾಡಿದ ಮೊದಲ ನಾಟಕದಲ್ಲೇ ರಂಗ ದಿಗ್ಗಜರು, ರಂಗ ಪ್ರಿಯರ ಮನಸೂರೆಗೊಂಡಿದ್ದಾರೆ.
ಹೌದು! ಗುರವಾರ ರಾತ್ರಿ ತಾಲೂಕಿನ ಕಲಾಗ್ರಾಮ ಮರಿಯಮ್ಮಹಳ್ಳಿಯಲ್ಲಿ ಜರುಗಿದ ಜಿಲ್ಲಾ ಕಾಲೇಜು ರಂಗೋತ್ಸವದಲ್ಲಿ ವಿದ್ಯಾರ್ಥಿಗಳ ಅಭಿನಯಕ್ಕೆ ಹಿರಿಯ ರಂಗ ಕಲಾವಿದೆ ಡಾ. ಕೆ.ನಾಗರತ್ನಮ್ಮ, ಹಿರಿಯ ರಂಗ ಕರ್ಮಿ ಮಾ. ಬ.ಸೋಮಣ್ಣ, ಪತ್ರಕರ್ತ ಸೋಮೇಶ್ ಉಪ್ಪಾರ ಸೇರಿದಂತೆ ಹಲವು ರಂಗಭೂಮಿಯ ಗಣ್ಯರು ಮಾರು ಹೋಗಿದ್ದಾರೆ.
ಕಾಲೇಜು ವಿದ್ಯಾರ್ಥಿಗಳ ಮನೋವಿಕಾಸ ಹಾಗೂ ಶೈಕ್ಷಣಿಕ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಕಲ್ಬುರ್ಗಿ ರಂಗಾಯಣ ಆಯೋಜಿಸಿದ್ದ ಇಪ್ಪತ್ತು ದಿನಗಳ ರಂಗ ತರಬೇತಿಯಲ್ಲಿ ಪಾಲ್ಗೊಂಡು ಅತೀವ ಆಸಕ್ತಿ, ಪರಿಶ್ರಮದಿಂದ ನಾಟಕ ಕಲಿತು ಯಶಸ್ವಿ ಪ್ರದರ್ಶನ ನೀಡಿದ ವಿದ್ಯಾರ್ಥಿಗಳ ಪ್ರತಿಭೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಹಿರಿಯ ರಂಗ ಕಲಾವಿದೆ ಡಾ. ಕೆ. ನಾಗರತ್ನಮ್ಮ ಅವರು,
ಏಕಲವ್ಯ ನಾಟಕವು ನೀನಾಸಂ ತಂಡದ ಕಲಾವಿದರೇ ಅಭಿನಯಿಸಿದರು ಎನ್ನುವಂತಿತ್ತು. ಈ ಮಕ್ಕಳ ಬಗ್ಗೆ
ಹೆಮ್ಮ ಅನಿಸಿತು. ಸಂತಸವಾಯಿತು. ಜಿಂಕೆ ಪಾತ್ರದಲ್ಲಿ ನಟಿಸಿದ ವಿದ್ಯಾರ್ಥಿಗೆ ಒಂದೇ ಒಂದು ಡೈಲಾಗ್ ಇಲ್ಲದೆಯೂ ಪ್ರೇಕ್ಷಕರನ್ನು ಅಂತ್ಯಂತ ಪರಿಣಾಮಕಾರಿಯಾಗಿ ಕಾಡುತ್ತಾಳೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಾ. ಬ. ಸೋಮಣ್ಣ ಅವರು ರಾಜ್ಯದ ಯಾವುದೇ ರಂಗ ಸ್ಪರ್ಧೆಯಲ್ಲೂ ಭಾಗವಹಿಸಿದರೂ ಪ್ರಶಸ್ತಿಯನ್ನು ಗೆದ್ದುಕೊಡುವ ನಾಟಕ. ಇತ್ತೀಚೆಗೆ ರಂಗದ ಮೇಲೆ ನೋಡಿದ ಅತ್ಯುತ್ತಮ ನಾಟಕ. ಎಲ್ಲ ಪಾತ್ರಗಳನ್ನು ಕಾಲೇಜು ವಿದ್ಯಾರ್ಥಿಗಳೇ ನಿರ್ವಹಿಸಿರುವುದನ್ನು ಕಂಡಾಗ ಅಚ್ಚರಿಯಾಗುತ್ತದೆ. ನಾಟಕದ ಸಂಗೀತ, ಅಭಿನಯ, ನಿರ್ದೇಶನ, ರಂಗ ಸಜ್ಜಿಕೆ ಎಲ್ಲಾ ಪ್ರಾಕಾರಗಳಲ್ಲೂ ಮಿಂಚಿರುವುದು ವಿಶೇಷ ಎಂದು ಮುಕ್ತಕಂಠದಿಂದ ಪ್ರಶಂಸಿದರು.
ಕಾಲೇಜಿನ ಸಾಂಸ್ಕೃತಿಕ ಬಳಗದ ಸಂಚಾಲಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ.ನಾಗಣ್ಣ ಕಿಲಾರಿ ಅವರ ಉತ್ತೇಜನವನ್ನು ವಿದ್ಯಾರ್ಥಿಗಳು ನೆನೆಯುತ್ತಾರೆ. ಅಭಿನಯದ ಗಂಧವೇ ಗೊತ್ತಿಲ್ಲದ ತಮಗೆ ನಾಟಕ ಆಡಲು ಪ್ರಾಚಾರ್ಯ ಡಾ. ಬಿ ಜಿ ಕನಕೇಶ ಮೂರ್ತಿ ಅವರ ಪ್ರೋತ್ಸಾಹ, ನಿರ್ದೇಶಕ ಸರದಾರ ಬಾರಿಗಿಡದ, ರಂಗ ಸಜ್ಜಿಕೆ ನಿರ್ವಹಿಸಿದ ಸತೀಶ್ ಅವರ ಮಾರ್ಗದರ್ಶನವನ್ನು ಮರೆಯುವಂತಿಲ್ಲ ಎಂದರು.
*****
ನಾಟಕ ರಚನೆ: ಡಾ: ರಾಮಪ್ಪ ಲೋಕೇಶ್.
ನಿರ್ದೇಶನ: ಸರದಾರ ಬಿ, ನೀನಾಸಂ.
ಸಂಗೀತ: ಪುರುಷೋತ್ತಮ್.
ವಾದ್ಯಗಾರರು: ಕಲ್ಯಾಣಿ ಭಜಂತ್ರಿ.
ರಂಗಸಜ್ಜಿಕೆ: ಸತೀಶ್ ಡಿಪಿ ಪುರಪ್ಪಮನೆ.
ಪಾತ್ರದಾರಿಗಳ ಪರಿಚಯ:
ಏಕಲವ್ಯ:ಬಸವರಾಜ, ಏಕಲವ್ಯನ ಗೆಳೆಯ:ಅನಿಲ್ ಎಚ್, ಏಕಲವ್ಯನ ತಾಯಿ:ಹರ್ಷಿತಾ, ಜಿಂಕೆ: ಕಾವ್ಯ, ಅರ್ಜುನ: ಶಿವಗಂಗಾ ಬಡಿಗೇರ್, ದ್ರೋಣಾಚಾರ್ಯ: ಯು, ರವಿ, ಸೇವಕರು: ನಾಗರಾಜ್., ಯಮನೂರು ಸ್ವಾಮಿ, ಅಭಿಷೇಕ್.ಮೇಳದವರು: ಸರೋಜ ಎಚ್, ತಿಪ್ಪಮ್ಮ ಎಚ್, ಛಾಯಾ, ಸ್ನೇಹ ಟಿ.
ಕರಡಿ: ಶಿವಪ್ರಕಾಶ್.
*****