ಹೊಸಪೇಟೆ, ಮಾ.11: ವಿದ್ಯಾರ್ಥಿ, ಯುವಜನರಿಗೆ ರಂಗ ಶಿಕ್ಷಣ ಅಗತ್ಯವಿದೆ ಎಂದು ನಗರದ ಶ್ರೀ ಶಂಕರ ಆನಂದಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ.ಕನಕೇಶ್ ಮೂರ್ತಿ ಅವರು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ಕಲ್ಬುರ್ಗಿ ಇವರ ಸಹಯೋಗದಲ್ಲಿ ತಾಲೂಕಿನ ಮರಿಯಮ್ಮನಹಳ್ಳಿಯ ದುರ್ಗಾದಾಸ ಬಯಲುರಂಗಮಂದಿರದಲ್ಲಿ ಗುರುವಾರ ರಾತ್ರಿ ಆರಂಭವಾದ ಮೂರು ದಿನಗಳ ಜಿಲ್ಲಾ ಕಾಲೇಜು ರಂಗೋತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಾಲೇಜುಗಳಲ್ಲಿ ರಂಗಚಟುವಟಿಕೆಗಳು ನಿರಂತರವಾಗಿ ಜರುಗಲು ಸರಕಾರದ ಆರ್ಥಿಕ ಸಹಕಾರ ಅಗತ್ಯ.
ರಂಗಾಯಣ ಈ ಬಾರಿ ರಾಜ್ಯಾದ್ಯಾಂತ ಕಾಲೇಜು ವಿದ್ಯಾರ್ಥಿಗಳನ್ನು ರಂಗಭೂಮಿಗೆ ತೊಡಗಿಸಿಕೊಳ್ಳುತ್ತಿರುವುದು ವಿಶೇವಾದ ಬೆಳವಣಿಗೆ ಇದು ನಿರಂತರ ಸಾಗಲಿ ಎಂದು ಹೇಳಿದರು.
ಮುಖ್ಯ ಅತಿಥಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ರಂಗಕರ್ಮಿ ಮಾ ಬ ಸೋಮಣ್ಣ ಅವರು ಮಾತನಾಡಿ, ಸಮಾಜದ ಬದಲಾವಣೆಯಲ್ಲಿ ನಾಟಕ ಪ್ರಮುಖ ಪಾತ್ರ ವಹಿಸುತ್ತದೆ. ಏಕಕಾಲಕ್ಕೆ ಪ್ರೇಕ್ಷಕರನ್ನೂ ತೃಪ್ತಿಪಡಿಸುವ ಮಾಧ್ಯಮ ಎಂದರು.
ಶಿಕ್ಷಣ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಲ್ಲಿ ರಂಗಕಲೆ ಅಗತ್ಯವಿದೆ. ಗುಣಮಟ್ಟದ ಶಿಕ್ಷಣ ಮಕ್ಕಳಮೇಲೆ ಪರಿಣಾಮ ಬೀರುತ್ತದೆ. ಎಂದು ಪ್ರತಿಪಾದಿಸಿದರು. ಕಾಲೇಜುಗಳಲ್ಲಿಯೂ ಕಡ್ಡಾಯವಾಗಿ ರಂಗಶಿಕ್ಷಣ ನೀಡಬೇಕು. ರಂಗಶಿಕ್ಷಕರ ನೇಮಕಾತಿಯನ್ನು ಮಾಡಬೇಕು ಎಂದು ಸೋಮಣ್ಣ ಆಗ್ರಹಿಸಿದರು,
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಮಾಜ ಸೇವಕ ಕುರಿ ಶಿವಮೂರ್ತಿ ಮಾತನಾಡಿ ರಂಗಕಲೆಗೆ, ಕಲಾವಿದರಿಗೆ ಜಾಗತಿಕ ಮಾನ್ಯತೆ ಇದೆ. ಮರಿಯಮ್ಮನಹಳ್ಳಿಯಲ್ಲಿ ಅಪಾರ ಸಂಖ್ಯೆಯಲ್ಲಿ ಕಲಾವಿದರಿದ್ದಾರೆ. ಇವರ ಜೀವನ ಭದ್ರತೆಗೆ ಸರ್ಕಾರ ನೆರವು ಒದಗಿಸಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಿ.ಅಂಬಣ್ಣ, ಲಲಿತಕಲಾರಂಗದ ಅಧ್ಯಕ್ಷ ಹೆಚ್.ಮಂಜುನಾಥ, ಮರಿಯಮ್ಮನಹಳ್ಳಿ ಪಟ್ಟಣಪಂಚಾಯಿತಿ ಸದಸ್ಯರಾದ ಕೆ.ಮಂಜುನಾಥ, ಸುರೇಶ್ ಮರಡಿ. ಮುಖಂಡ ಬಿ.ಆನಂದ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ನಾಗಣ್ಣ ಕಿಲಾರಿ, ಡಾ. ಕೆ. ವೆಂಕಟೇಶ್, ಡಾ. ಟಿ. ಎಚ್. ಬಸವರಾಜ್, ಡಾ. ಷಣ್ಮುಖಪ್ಪ ಮತ್ತಿತರರು ಉಪಸ್ಥಿತರಿದ್ದರು.
ಏಕಲವ್ಯ ನಾಟಕ: ರಂಗಾಯಣ ಕಲಬುರ್ಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆರಂಭವಾದ ರಂಗೋತ್ಸವದ ಮೊದಲ ದಿನ ಎಸ್.ಎಸ್.ಎ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಡಾ. ರಾಮಣ್ಣ ಲೋಕೇಶ್ ವಿರಚಿತ ಸರದಾರ ಬಾರಿಗಿಡದ ನಿರ್ದೇಶನದ ಏಕಲವ್ಯ ನಾಟಕ ನೆರೆದಿದ್ದ ರಂಗ ಪ್ರಿಯರ ಮನ ಗೆದ್ದಿತು.
*****