ಮೈಸೂರು, ಮಾ.13: ತಮ್ಮ ಅಭಿನಯ, ಸಮಾಜಮುಖಿ ಕಾರ್ಯಗಳಿಂದ ಕರುನಾಡಿನ ಮನೆಮತಾಗಿದ್ದ ದಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಮರಣೋತ್ತರ ಗೌರವ ಡಾಕ್ಟರೇಟ್ ಘೋಷಿಸಿದೆ.
ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಅವರು ಈ ಬಾರಿ ಮೂವರು ಮಹನೀಯರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು. ಚಲನಚಿತ್ರ ನಟ ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಡಾಕ್ಟರೇಟ್, ಹಿರಿಯ ವಿಜ್ಞಾನಿ ಡಾ ವಿ.ಎಸ್. ಅತ್ರೆ ಮತ್ತು ಜನಪದ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದರು.
ಪುನೀತ್ ರಾಜಕುಮಾರ್ ಕುಟುಂಬದವರನ್ನು ಸಂಪರ್ಕಿಸಲಾಗಿದೆ. ಪುನೀತ್ ಅವರ ಪತ್ನಿ ಅಶ್ವಿನಿ ಅವರು ಘಟಿಕೋತ್ಸವಕ್ಕೆ ಬರಲು ಒಪ್ಪಿದ್ದಾರೆ ಎಂದು ಕುಲಪತಿ ಹೇಳಿದರು.
ಇದೇ ಮಾ. 22 ರಂದು ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು ಅಂದು ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗುವುದು.
ಘಟಿಕೋತ್ಸವದಲ್ಲಿ 28581 ಅಭ್ಯರ್ಥಿಗಳಿಗೆ ಪದವಿ, 5677 ಅಭ್ಯರ್ಥಿ ಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುವುದು. ವಿವಿಧ ಅಭ್ಯರ್ಥಿಗಳು ಚಿನ್ನದ ಪದಕ ಇತರೆ ಬಹುಮಾನ ಪಡೆದಿದ್ದಾರೆ. ಘಟಿಕೋತ್ಸವದ ಭಾಷಣವನ್ನು ವಿದ್ವಾಂಸ ಎಸ್ ಸಿ ಶರ್ಮಾ ಅವರು ಮಾಡಲಿದ್ದಾರೆ ಎಂದು ಕುಲಪತಿ ಪ್ರೊ. ಹೇಮಂತ್ ಕುಮಾರ್ ಮಾಹಿತಿ ನೀಡಿದರು.
****”