ಹನಿಗವನಗಳು
..ಯಾರು?
ಓಟು ಹಾಕುವ ಮುನ್ನ
ರಾಜಕಾರಣಿ ಹೇಳುವನು
” ನೀವೇ ನನ್ನ ದೇವರು ” ;
ಗೆದ್ದು ಗದ್ದುಗೆಯನ್ನೇರಿ
ಕುಳಿತಾಗ ಕೇಳುವನು
” ತಾವೆಲ್ಲರೂ ಯಾರು ” !?
ರಾಜಕೀಯ
ರಾಜಕೀಯದ
ಚದುರಂಗದಾಟದಲ್ಲಿ
ಆಟ ಬಲ್ಲವನಿಗೇ
ಗೆಲುವು ಖಚಿತ ;
ರಾಜಕೀಯದ
ಗಂಧ – ಗಾಳಿ ಅರಿಯದವ
ಅಪಹಾಸ್ಯಕ್ಕೆ ಗುರಿಯಾಗುವುದು
ನಿಶ್ಚಿತ.
ಚುನಾವಣೆ
ಐದು ವರ್ಷಕ್ಕೊಮ್ಮೆ ಬರುವ
ಚುನಾವಣೆಗೆ
ಜನರಲ್ಲಿ ಪ್ರಶ್ನೆ
ಜನನಾಯಕ ಯಾರಾಗಬೇಕು
ಯಾರಿಗೆ ನಿಮ್ಮ ಓಟು “;
ಅಯ್ಯೋ ಬಿಡಿ,
ಯಾರು ಗೆದ್ದರೇನಂತೆ?
ನಮ್ಮ ಒಂದು ಓಟಿಗೆ
ಸಿಕ್ಕರೆ ಸಾಕು
ಗುಲಾಬಿ ಬಣ್ಣದ ನೋಟು.
ಮಾರ್ಗ
ರಾಜಕೀಯದಲ್ಲಿ
ಎರಡು ದಾರಿಗಳು
ಒಂದು ನ್ಯಾಯ ಮಾರ್ಗ
ಇನ್ನೊಂದು ವಾಮ ಮಾರ್ಗ
ನ್ಯಾಯ ಮಾರ್ಗದಲ್ಲಿ
ನಂಬಿಕೆಗೆ ಸಿಗುವ ಜನರು
ಸರಳ, ವಿರಳ ;
ವಾಮ ಮಾರ್ಗದಲ್ಲಿ
ನಡೆಯುವವರಿಗೇ
ಜನರಿಂದ
ಜೈಕಾರ, ಬೆಂಬಲ.
ಸದ್ದು
ಚುನಾವಣಾ ಸಮಯದಲ್ಲಿ
ಊರಿಗೆ ಊರೇ
ಸದ್ದು – ಗದ್ದಲ ;
ನಂತರದಲ್ಲಿ ಗೆದ್ದವರ
ಸದ್ದೇ ಇಲ್ಲ !
ಯೋಧರು
ದೇಶಕಾಯೊ ಯೋಧರನ್ನು
ಕೇಳಲಿಲ್ಲ ಯಾವತ್ತೂ
” ನಿಮ್ಮ ಕಷ್ಟ ಏನೈತಿ ” ?
ಆದ್ರೂ ಅವರು ನಮ್ಮ ಹಿತೈಷಿ ;
ನಮ್ಮನ್ನಾಳುವ ರಾಜಕಾರಣಿ
ತಿರುಗಿ ನೀಡಲಿಲ್ಲ ಯಾವತ್ತೂ
ಆದ್ರೂ ಎಲ್ಲರೂ ಮಣೆ ಹಾಕ್ತಾರ
ಕೈ ಜೋಡಿಸಿ.
ಪ್ರಣಾಳಿಕೆ
ಚುನಾವಣಾ ದಿನಗಳಲ್ಲಿ
ಪ್ರಣಾಳಿಕೆಯ ಘೋಷಣೆ ಕೂಗುವರು
ಹತ್ತಾರು ಬಾರಿ ;
ನಂತರದ ದಿನಗಳಲ್ಲಿ
ಯಾವುದೂ ಆಗುವುದಿಲ್ಲ
ಜಾರಿ !
-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ
*****