ಬಳ್ಳಾರಿ ಪಾಲಿಕೆ ಮೇಲೆ ಎರಡನೇ ಬಾರಿ ಹಾರಾಡಿದ ಕಾಂಗ್ರೆಸ್ ಬಾವುಟ: ಎಂ. ರಾಜೇಶ್ವರಿ ಮೇಯರ್, ಮಾಲಾನ್ ಬೀ ಉಪ ಮೇಯರ್

ಬಳ್ಳಾರಿ, ಮಾ.19: ರಾಜ್ಯಾದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಚುನಾಯಿತರಾಗುವ ಮೂಲಕ ಸತತ ಎರಡನೇ ಬಾರಿಗೆ ಪಾಲಿಕೆ ಮೇಲೆ ಕಾಂಗ್ರೆಸ್ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ 34 ನೇ ವಾರ್ಡಿನ ರಾಜೇಶ್ವರಿ ಸುಬ್ಬರಾಯಡು ಮಹಾಪೌರರಾಗಿ, ಉಪ ಮಹಾಪೌರರಾಗಿ 37 ನೇ ವಾರ್ಡಿನ ಮಾಲಾನ್ ಬೀ ಆಯ್ಕೆಯಾಗಿದ್ದಾರೆ. ಕಲಬುರಗಿ ಪ್ರಾದೇಶಿಕ ಆಯುಕ್ತ ವಿ.ಎನ್ ವರಪ್ರಸಾದ್ ಅವರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
ರಾಜೇಶ್ವರಿ ಸುಬ್ಬರಾಯಡು ಅವರಿಗೆ 21 ಕಾಂಗ್ರೆಸ್ ಪಾಲಿಕೆ ಸದಸ್ಯರು, ಐವರು ಪಕ್ಷೇತರು ಸೇರಿ ಒಟ್ಟು 29 ಮತಗಳನ್ನು ಪಡೆದು ಮಹಾಪೌರರಾಗಿ, ಮಾಲಾನ್ ಬೀ ಅವರೂ ಸಹ 29 ಮತಗಳನ್ನು ಪಡೆದು ಉಪ ಮಹಾ ಪೌರರಾಗಿ ಆಯ್ಕೆಯಾದರು..
ಮಹಾಪೌರರು-ಉಪ ಮಹಾಪೌರರ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗಳಾದ  ಸುರೇಖಗೌಡ ಹಾಗೂ ಎಂ. ಗೋವಿಂದರಾಜುಲು  ತಲಾ 15 ಮತಗಳನ್ನು ಪಡೆಯುವ ಮೂಲಕ ಸೋಲು ಅನುಭವಿಸಿದರು. ಶಾಸಕರಾದ ಬಿ.ನಾಗೇಂದ್ರ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜೆ.ಎಸ್ ಆಂಜನೇಯಲು, ಕೊರ್ಲಗುಂದಿ ಜಿಲ್ಲಾ ಪಂಚಾಯತ್ ಸದಸ್ಯ ನಾರಾ ಭರತ್ ರೆಡ್ಡಿ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದು ನೂತನ ಮೇಯರ್, ಉಪ ಮೇಯರ್ ಅವರನ್ನು ಅಭಿನಂದಿಸಿದರು.
ಶಾಸಕ ಬಿ.ನಾಗೇಂದ್ರ ಅವರು ಕಾಂಗ್ರೆಸ್ ಹಾಗೂ ಪಕ್ಷೇತರ ಮಹಾನಗರ ಪಾಲಿಕೆ ಸದಸ್ಯರಿಗೆ, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಆಪರೇಷನ್ ಕಮಲ ಭೀತಿಯಿಂದ ಪಾಲಿಕೆಯ ಎಲ್ಲಾ ಕಾಂಗ್ರೆಸ್ ಪಕ್ಷದ ಹಾಗೂ ಪಕ್ಷಕ್ಕೆ ಬೆಂಬಲಿಸಿದ ಪಕ್ಷೇತರ ಸದಸ್ಯರು ಬೆಂಗಳೂರಿನ ರೆಸಾರ್ಟ್ ವೊಂದರಲ್ಲಿ ತಂಗಿದ್ದರು.
*****