ಅನುದಿನ‌ ಕವನ-೪೫೧, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಕವಿತೆ

ಕವಿತೆ

ಕವಿತೆಯೆಂದರೆ
ಮರಗಳಿಂದ
ಗಾಳಿಯಲ್ಲಿ ತೇಲಿ
ನಿಧಾನವಾಗಿ
ನೆಲ ತಲುಪುವ ಎಲೆ

ಕವಿತೆಯೆಂದರೆ
ಬಿಸಿ ಹೆಂಚಲ್ಲಿ
ಅವ್ವ ತಟ್ಟಿಕೊಟ್ಟ
ಹದವಾಗಿ ಬೆಂದ ರೊಟ್ಟಿ

ಕವಿತೆಯೆಂದರೆ
ಅವನು ಮತ್ತು ಅವಳು
ಮಾತಿಲ್ಲದ
ಮಾತುಗಳಿಂದಲೇ
ಆಡುವ ಪ್ರೀತಿಯ ಮಾತು

ಕವಿತೆಯೆಂದರೆ
ಮಗುವಿನ ಅಳು
ಕೇಳಿದೊಡನೆ
ಅವಸರದಿಂದ ಧಾವಿಸುವ
ಅವ್ವನ ಧಾವಂತ

ಕವಿತೆಯೆಂದರೆ
ನೆಲದೊಡಲಿಂದ
ಹಸಿರು ಮೂಡಿದಾಗ
ಉಳುವವನ ಕಣ್ಣಲ್ಲಿ
ಕಾಣುವ ಸಾರ್ಥಕ್ಯ

ಕವಿತೆಯೆಂದರೆ
ಶತ್ರುವಿನ ಎದೆಯಲ್ಲೂ
ಕಂಬನಿ ತುಂಬಿ
ಮೂಡುವ ಪ್ರೀತಿಯ ಭಾವ

ಕವಿತೆಯೆಂದರೆ
ಇಷ್ಟೆ-
ಅದು ಕವಿಯ
ತಾಯ್ತನ !

-ಸಿದ್ಧರಾಮ ಕೂಡ್ಲಿಗಿ