ಹೊಸಪೇಟೆ, ಮಾ. 27: ಕಳೆದ ನಾಲ್ಕು ದಶಕಗಳಿಂದ ಸಂಗೀತದ ಮೂಲಕ ರಂಗ ಸೇವೆ ಸಲ್ಲಿಸುತ್ತಿರುವ ಹಿರಿಯ ಸಂಗೀತಗಾರ ವಿ.ಡಿ ವೆಂಕನಗೌಡ ಅವರಿಗೆ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಹಿರಿಯ ಪತ್ರಕರ್ತ, ಸಾಂಸ್ಕೃತಿಕ ಸಂಘಟಕ ಸಿ.ಮಂಜುನಾಥ್ ಒತ್ತಾಯಿಸಿದರು.
ಬಳ್ಳಾರಿಯ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಮತ್ತು ಸಂಸ್ಕೃತಿ ಪ್ರಕಾಶನದ
ಸಹಯೋಗದಲ್ಲಿ ಭಾನುವಾರ ಜರುಗಿದ ವಿಶಿಷ್ಟ, ವಿನೂತನ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಹಿರಿಯ ರಂಗಕಲಾವಿದರು, ಯುವ ರಂಗಕರ್ಮಿಗೆ ಸತ್ಕರಿಸಿ ಅವರು ಮಾತನಾಡಿದರು.
ಸುಮಾರು ಎರಡು ಸಾವಿರ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ನಾಟಕಗಳಿಗೆ ಸಂಗೀತ ನೀಡುವ ಮೂಲಕ ತಮ್ಮದೇ ಆದ ರೀತಿಯಲ್ಲಿ ರಂಗಭೂಮಿಗೆ ಕೊಡುಗೆ ನೀಡಿದ 81 ವರ್ಷ ಹರೆಯದ ವೆಂಕನಗೌಡರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಕೂಡಾ ದೊರೆಯದಿರುವುದು ನೋವಿನ ಸಂಗತಿ ಎಂದು ವಿಷಾಧಿಸಿದರು.
ಬಳ್ಳಾರಿ, ವಿಜಯನಗರ ಜಿಲ್ಲೆಗಳ ಎಲ್ಲಾ ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ನಾಟಕ(ಡ್ರಾಮಾ) ವಿಭಾಗ ಆರಂಭಿಸಬೇಕು ಎಂದು ಒತ್ತಾಯಿಸಿದರು.
ತೋರಣಗಲ್ಲು ಜೆ ಎಸ್ ಡಬ್ಲ್ಯು ಸಂಸ್ಥೆಯ ಉಪ ವ್ಯವಸ್ಥಾಪಕ ರಮೇಶ್ ಕಂಟ್ಲಿ ಅವರು ಮಾತನಾಡಿ,
ಕಳೆದ 18 ವರ್ಷಗಳಿಂದ ಪ್ರತಿ ವರ್ಷವೂ ವಿಶ್ವ ರಂಗಭೂಮಿ ದಿನವನ್ನು ವಿಶಿಷ್ಟವಾಗಿ ಆಚರಿಸುತ್ತಿರುವ
ಭರಣಿ ವೇದಿಕೆ, ಸಂಸ್ಕೃತಿ ಪ್ರಕಾಶನದ ಕಾರ್ಯವನ್ನು ಶ್ಲಾಘಿಸಿದರು.
ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸಿದ ಹಿರಿಯ ಹಾಗೂ ಯುವ ರಂಗ ಕಲಾವಿದರು, ರಂಗ ಕರ್ಮಿಗಳನ್ನು ಗುರುತಿಸಿ ಅವರವರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರು, ಬಂಧು ಮಿತ್ರರ ಸಮ್ಮುಖದಲ್ಲಿ ಸತ್ಕರಿಸಿ ಗೌರವಿಸುವುದು ಮಾದರಿ ಕಾರ್ಯ ಎಂದರು.
ನಾಡಿನ ಕಲಾಗ್ರಾಮಗಳಲ್ಲಿ ಒಂದಾದ ಮರಿಯಮ್ಮನಹಳ್ಳಿಯ ಹಿರಿಯ ರಂಗ ಕಲಾವಿದೆ ಡಾ.ಕೆ.ನಾಗರತ್ನಮ್ಮ ಮತ್ತು ಯುವ ರಂಗ ಕರ್ಮಿ ಸರದಾರ ಬಿ ಅವರನ್ನು ವೇದಿಕೆ ಅಧ್ಯಕ್ಷ ಸಿ.ಮಂಜುನಾಥ ಮತ್ತಿತರ ಗಣ್ಯರು ಸತ್ಕರಿಸಿ ಗೌರವಿಸಿದರು.
ಡಾ. ನಾಗರತ್ನಮ್ಮ ಮತ್ತು ಸರದಾರ ಮಾತನಾಡಿ ಮನೆಯ ಅಂಗಳಕ್ಕೆ ಬಂದ ರಂಗ ಗೌರವ ನಮ್ಮನ್ನು ಮತ್ತಷ್ಟು ಉತ್ತೇಜಿಸಿದೆ. ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ, ರಂಗ ಕಲಾವಿದ ಸಿ.ಕೆ. ನಾಗರಾಜ್, ಉಪನ್ಯಾಸಕ ಅಂಬಳಿ ವಿರೇಂದ್ರ, ರಂಗ ಗಾಯಕಿ ಸಂಗೀತಾ ವೀರೇಂದ್ರ, ಯುವ ಸಂಗೀತಗಾರ ಅಭಿನಂದನ್, ಕಲಾವಿದರ ಕುಟುಂಬದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ರಂಗ ಗೌರವ ಆರಂಭ: 2004-05ರಲ್ಲಿ ಬಳ್ಳಾರಿಯ ನಾಡೋಜ ಬೆಳಗಲ್ಲು ವೀರಣ್ಣ, ನಾಡೋಜ ಡಾ. ಸುಭದ್ರಮ್ಮ ಮನ್ಸೂರು ಅವರಿಂದ ಆರಂಭಗೊಂಡ ರಂಗ ಗೌರವ, ಸತ್ಕಾರ ಪ್ರಸ್ತುತ 2022ರಲ್ಲೂ ಮುಂದುವರೆದಿದೆ. ಹಿರಿಯ ಬಯಲಾಟ ಕಲಾವಿದೆ ನಾಡೋಜ ಕಪ್ಪಗಲ್ಲು ಪದ್ಮಮ್ಮ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಮೇಶ ಗೌಡ ಪಾಟೀಲ್, ರಂಗಾರೆಡ್ಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆರಾದ ಬಿ. ಸುಜಾತಮ್ಮ, ಉಮಾರಾಣಿ ಇಳಕಲ್ಲು, ಹಿರಿಯ ರಂಗಕಲಾವಿದರಾದ ವೆಂಕೋಬಾಚಾರ್, ಕೆ. ಗಾದಿಲಿಂಗನ ಗೌಡ, ಸುಬ್ಬಣ್ಣ, ಶಿವೇಶ್ವರ ಗೌಡ ಕಲ್ಲುಕಂಬ, ಆರ್ ಎನ್ ಚಂದ್ರಮೌಳಿ, ಕೂಡ್ಲಿಗಿಯ ಜ್ಯೋತಿ, ಗೆಣಕಿನಹಾಳ್ ತಿಮ್ಮನಗೌಡ, ಎಂ. ಮೋಹನ ರೆಡ್ಡಿ, ಮೋಕ ರಮೇಶ್, ಕೊಳಗಲ್ಲು ಉಮರ್, ಅಮರೇಶಯ್ಯ, ಯುವ ರಂಗ ಕರ್ಮಿ ಸಂಸ ಸುರೇಶ್, ನೇತಿ ರಘುರಾಮ್, ಅಣ್ಣಾಜಿ ಕೃಷ್ಣಾರೆಡ್ಡಿ ಸೇರಿದಂತೆ ಹಲವರನ್ನು ಗುರುತಿಸಿ ಗೌರವಿಸಿರುವುದು ಎರಡು ಸಂಸ್ಥೆಗಳ ಹೆಗ್ಗಳಿಕೆಯಾಗಿದೆ.
*****