ಗಜ಼ಲ್
ನೋವು ಕೇಳದವರ ಮುಂದೆ ಬಿಕ್ಕಬೇಡ ಸುಮ್ಮನೆ
ಕರುಣೆ ಇಲ್ಲದವರ ಇದಿರು ನೋಯಬೇಡ ಸುಮ್ಮನೆ
ಇಲ್ಲಿ ಯಾರ ದುಃಖಕ್ಕೂ ಯಾರಿಗೂ ಮಿಡಿಯುವ ಮನಸಿಲ್ಲ
ವಿನಾಕಾರಣ ಎಲ್ಲರ ಬಳಿ ಎದೆತೆರೆದು ಕೊರಗಬೇಡ ಸುಮ್ಮನೆ
ನಿಜ ಪ್ರೀತಿಯನ್ನೇ ಅಪಹಾಸ್ಯ ಮಾಡಿ ನಗಾಡುವರು ಮಂದಿ
ಹಿಡಿ ಒಲವಿಗಾಗಿ ಬೊಗಸೆಯೊಡ್ಡಿ ನಿರಾಶನಾಗಬೇಡ ಸುಮ್ಮನೆ
ನಿನ್ನ ನೋವುಗಳಿಗೆ ನೀನೇ ಮಡಿಲಾಗಿ ಸಂತೈಸಬೇಕು
ಬೇರೆಯವರು ನೇವರಿಸುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬೇಡ ಸುಮ್ಮನೆ
ಮನುಷ್ಯತ್ವವನ್ನೇ ಮರೆತಿರುವ ಲೋಕದ ಮುಂದೆ ಕಣ್ಣೀರಿಗೆ ಬೆಲೆಯಿಲ್ಲ ‘ನಾಗೇಶಿ’
ಅವುಡುಗಚ್ಚಿ ತಾಳಿಕೋ ಎಲ್ಲ ಕಷ್ಟಗಳ ಕೈಚೆಲ್ಲಿ ಕೂರಬೇಡ ಸುಮ್ಮನೆ
-ನಾಗೇಶ್ ಜೆ. ನಾಯಕ, ಸವದತ್ತಿ
*****