ಅನುದಿನ‌ ಕವನ-೪೫೮, ಕವಿ: ಮನು ಪುರ, ತುಮಕೂರು, ಕವನದ ಶೀರ್ಷಿಕೆ: ಕರ್ಣ

ಕರ್ಣ

ಹೆತ್ತವಳಿಗೋ ಮರ್ಯಾದೆಯೇ
ಮುಖ್ಯವಾಗಿತ್ತು
ನೀರ ಮೇಲೆ ತೇಲಿ ಬಿಟ್ಟಳು
ಚೊಚ್ಚಲ ಮಗುವನ್ನೇ…!

ಮಗದೊಬ್ಬಳೊ
ಕಾದು ಕಾದು ಸೋತಿದ್ದಳು
ಕಾರ್ಗತ್ತಲ ದಾರಿಯಲ್ಲಿ
ಬೆಳಕು ಸಿಕ್ಕಷ್ಟೇ ಖುಷಿಯಿಂದ
ಲಾಲಿಸಿದಳು ಪಾಲಿಸಿದಳು
ಜೀವಕ್ಕಿಂತಲೂ ಹೆಚ್ಚಾಗಿ ನನ್ನನ್ನೆ…!

ನನ್ನ ತೊಡೆಯನ್ನೇ ಕೊರೆಯುತ್ತಿದ್ದರೂ
ನೆಮ್ಮದಿಯ ನಿದಿರೆಗಾಗಿ ಸಹಿಸಿ
ಗುರುವಿನಿಂದಲೇ ಶಾಪ ಪಡೆದವನು ನಾನು
ಏನೆಂದು ತಿಳಿಯದೆ ಒಡಲ ಬಗೆದೆನೆಂದು
ಭೂಮಿಯಿಂದಲೂ ಶಫಿಸಲ್ಪಟ್ಟವನು ನಾನು
ಒಳ್ಳೆಯತನಕ್ಕೂ ಅದೆಷ್ಟು ಅವಮಾನ ಜಗದಲ್ಲಿ…!

ಎಲ್ಲಿಯೇ ಹೋಗಲಿ ,ಏನನ್ನೇ ಮಾಡಲಿ
ನನ್ನಂತ ಅದೆಷ್ಟೋ ಮಂದಿಗೆ
ದಿನವು ಇದ್ದಿದ್ದೇ ;ಹೀನ ಕುಲದವರೆಂಬ ಹೀಯಾಳಿಕೆ
ಅವಸಾನವೇ ಇಲ್ಲದ್ದೆನಿಸುತ್ತದೆ ಈ ದರಿದ್ರ ವ್ಯವಸ್ಥೆ…!

ಕೌರವೇಂದ್ರ ಸಿಕ್ಕ ನಂತರ
ಸ್ವಾಭಿಮಾನದ ಖುಷಿಯಿತ್ತು
ದುರದೃಷ್ಟಕ್ಕೆ ಯುದ್ಧ ಶುರುವಾಯಿತು
ಜನ್ಮವೃತ್ತಾಂತದ ವ್ಯೂಹದೊಳಗೆ
ಕರೆದು;ಕೇಳಿದಳು ತೊಟ್ಟಬಾಣವ ತೊಡದಿರೆಂದು..!
ಎಂಥಹ ಪಾಪದವನಲ್ಲವೇ ನಾನು
ತಾಯಿಯಿಂದಲೇ ಎರಡೆರಡು ಬಾರಿ ಎಸೆಯಲ್ಪಟ್ಟಿದ್ದೇನೆ..!

ತಿಳಿದೂ ತಿಳಿದೂ; ಇಲ್ಲವೆನದೆ
ಇರುವುದೆಲ್ಲವ ದಾನವಾಗಿ ಕೊಟ್ಟೆ ;
ಹೊಗಳಿಕೆಯ ಹುಚ್ಚು ಎನ್ನುವಿರ
ಸಾಧ್ಯವಾದರೆ ಉಗುರನ್ನೆ ಒಮ್ಮೆ ಕಿತ್ತು ನೋಡಿ
ಕುಂಡಲಿ ಕವಚಗಳನ್ನೇ ಕೊಟ್ಟವನು ನಾನು…!

ನನ್ನ ನತದೃಷ್ಟ  ಕಥೆಗೆ
ದೇವರೆನಿಸಿಕೊಂಡವನೇ ಖಳನಾಯಕ
ಕೊನೆಗಾಲದಲ್ಲೇ ಕೈಕೊಟ್ಟವು
ರಥ,ಮಂತ್ರ,ಕೊನೆಗೆ ಸಾರಥಿಯು
ನಿಶ್ಯಸ್ತ್ರನಾದವನ ಎದೆಗೆ ;ನೇರ ಬಾಣ ಪ್ರಯೋಗ
ಧರ್ಮ ರಕ್ಷಣೆಯ ಹೆಸರಲ್ಲಿ
ಇಂತಹ ಅದೆಷ್ಟೋ  ಅನ್ಯಾಯಗಳಿವೆ…!

ಸೂತನಲ್ಲದಿದ್ದರೆ ;ನನ್ನ ಪಾತ್ರಕ್ಕೆ
ಬೇರೆಯೇ  ಅಂತ್ಯವಿರುತ್ತಿತ್ತೇನೋ
ಸತ್ತರೂ ಚಿಂತೆಯಿಲ್ಲ
ಮತ್ತೊಮ್ಮೆ ;ಹೀಗೆಯೇ ಹುಟ್ಟುವಾಸೆ
ಕುಂತಿ ಮತ್ತು ಅವಳ ಮಕ್ಕಳಿಗಾಗಿ ಎಂದುಕೊಂಡಿರ
ಸಾಧ್ಯವೇ ಇಲ್ಲ , ಇವನು ಕರ್ಣ
ಎಂದಿಗೂ ಬದಲಾಗಲಾರ
ನನ್ನ ಬದುಕು ಕೇವಲ ದುರ್ಯೋಧನನಿಗಾಗಿ…!

-ಮನು ಪುರ, ತುಮಕೂರು
*****