ಆ ಬೆಳದಿಂಗಳ ರಾತ್ರಿಗಳು
ಆ ಸುಂದರ ಬೆಳದಿಂಗಳ ರಾತ್ರಿ
ಹಳ್ಳಿ ಮನೆಯ ಕಣ್ತುಂಬುವ ಚಿತ್ರಣ
ಸೆಗಣಿ ಸಾರಿಸಿದ ಸೊಗಸಿನ ಅಂಗಳ
ಅಪ್ಪಾ ಅಮ್ಮ ಬಂಧು ಬಳಗ
ಒಡಹುಟ್ಟಿದವರೊಂದಿಗೆ ಸಡಗರ
ಬಾನಲ್ಲಿ ನಗುವ ಹುಣ್ಣಿಮೆಯ ಚಂದಿರ
ಮಕ್ಕಳ ತುಂಟಾಟ ಹಿರಿಯರ ಓಡಾಟ
ಕಂದಮ್ಮಗಳೊಂದಿಗೆ ಮುದ್ದಾಟ
ತಂಪು ತಂಗಾಳಿಯ ಒಡನಾಟ
ಒಂದೆಡೆ ಕುಳಿತು ಕತೆ ಹೇಳುವ ಅಜ್ಜ
ಅವರ ಸುತ್ತ ಕಂಬಳಿ ಹೊದ್ದು ಕುಳಿತ
ಪುಣಾಣಿಗಳ ತಂಡ
ದೂರದಲ್ಲಿ ಹರಿಯುವ ತೊರೆಯ
ಜುಳುಜುಳು ನಾದ
ತೊಯ್ದಾಡುತ್ತಿರುವ ತೆಂಗುಕಂಗು
ಬಾಳೆಗಳ ಬೆಡಗು
ಅರಳುತ್ತಿರುವ ದುಂಡುಮಲ್ಲಿಗೆಯ ಕಂಪು
ಮೈಕೊರೆಯುವ ಚಳಿಗೆ
ಸುಡುಸುಡುವ ಹಂಡೆ ನೀರಿನ ಸ್ನಾನ
ಅಂಗಳದ ಮೂಲೆಯಲ್ಲಿ
ಧಗಧಗಿಸುವ ಸೌದೆ ಒಲೆಯಲ್ಲಿ
ಬೇಯುತ್ತಿರುವ ಕುಸಲಕ್ಕಿಯ ಘಮ
ಅಲ್ಲೇ ಪಕ್ಕದಲ್ಲಿ ಕುಳಿತು ಒಣಮೀನುಗಳ
ಸುಡುತ್ತಿರುವ ಅಜ್ಜಿಯ ಸಂಭ್ರಮ
ಜೊಳ್ಳನೇ ತುಂಬಿಕೊಂಡಿತ್ತು ಬಾಯಲ್ಲಿ ನೀರು
ಹೊಟ್ಟೆಯೊಳಗೇ ಭುಗಿಲೆದ್ದಿತು ಹಸಿವೆಯು ಜೋರು
ಊಟ ಮಾಡೋಣ ಬನ್ನಿ ಎಲ್ಲಾ
ಒಂದೇ ಕರೆಗೆ ಕೂತೆವು ಸಾಲು ಸಾಲು
ಅಮ್ಮ ಬಡಿಸಿದಳು ಬಿಸಿಬಿಸಿ ಗಂಜಿ
ಒಣಮೀನು ಚಟ್ನಿ ಮಿಡಿ ಉಪ್ಪಿನಕಾಯಿ
ಇದು ಬೆಳದಿಂಗಳ ರಾತ್ರಿಯೋ…
ಸ್ವರ್ಗವಾದ ಧರಿತ್ರಿಯೋ…
ಅಬ್ಬಬ್ಬಾ… ಗಂಟಲೊಳಗೆ ಬಿಸಿಬಿಸಿ ಗಂಜಿ
ಹೊರಗೆ ಚುಮುಚುಮು ಚಳಿ
ನಾಲಗೆ ಕಡಿವಾಣವಿಲ್ಲದೆ ಚಪ್ಪರಿಸುತ್ತಿದೆ
ಬಡಿಸಿದಷ್ಟು ಇನ್ನೂ ಬೇಕು ಇನ್ನೂ ಬೇಕು ಎನ್ನುತ್ತಿದೆ
ಭಾರವಾದ ಹೊಟ್ಟೆ
ಎಳೆಯುತ್ತಿರುವ ಕಣ್ಣ ರೆಪ್ಪೆಗಳು
ಅಲ್ಲಲ್ಲಿ ಹಾಸಿದ್ದ ಹರಿದ ಮುರಿದ ಚಾಪೆ
ದಿಂಬು ಹೊದಿಕೆ
ದೊಡ್ಡಪ್ಪನೋ ದೊಡ್ಡಮ್ಮನೋ
ಮುಸುಕಿನೊಳಗೆ ನುಸುಳಿ
ಅಪ್ಪಿಕೊಂಡು ಮಲಗೇ ಬಿಟ್ಟೆವು…!!
ಕನಸಿಗೂ ಜಾಗವಿರಲಿಲ್ಲ
ಸಂತೃಪ್ತ ಈ ಮನಸ್ಸಿನಲ್ಲಿ
ಎಷ್ಟೊಂದು ಮಧುರ ಆ ದಿನಗಳು
ಮನದಾಳದಲ್ಲಿ ಅಚ್ಚೊತ್ತಿ
ಕಚಗುಳಿಯಿಡುತ್ತಿರುವ ರಸಮಯ ಕ್ಷಣಗಳು
ನಾನೇ ಧನ್ಯ…!!
ಆ ಸೊಗಸ ಸವಿಯುಂಡು
ಬದುಕಿನುದ್ದಕ್ಕೂ ಬಚ್ಚಿಟ್ಟು
ಮೆಲ್ಲಮೆಲ್ಲನೆ ಬಿಚ್ಚಿಟ್ಟು
ಚಪ್ಪರಿಸುತ್ತಿರುವ ನೆನಪಿನ ಬುತ್ತಿಗಳು
ಸಪ್ಪೆ ಬದುಕಿನ ಜೊತೆ ಬಲುರುಚಿ …
ಜೀವಕ್ಕೆ ಚೈತನ್ಯ ಮನಸ್ಸಿಗೆ ಖುಷಿ..
ಆ ಬೆಳದಿಂಗಳ ರಾತ್ರಿಗಳು… !!!
-ಅನಿತಾ ಸಿಕ್ವೇರಾ ಉಡುಪಿ
*****