ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.‌ಪರಮೇಶ್ವರ ಸರಳ, ಸಜ್ಜನಿಕೆಯ ರಾಜಕಾರಣಿ -ನಾಡೋಜ ಡಾ. ಬರಗೂರು ಮೆಚ್ಚುಗೆ

ತುಮಕೂರು, ಏ. 10: ಬಹುಪಾಲು ರಾಜಕಾರಣಿಗಳಿಗೆ ಸೌಜನ್ಯವಿರಲ್ಲ ಆದರೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಇದಕ್ಕೆ ಅಪವಾದವಾಗಿದ್ದು
ಸರಳ‌ ಸಜ್ಜನಿಕೆಯ ಮುತ್ಸದ್ಧಿ ಎಂದು ಪ್ರಸಿದ್ಧ ಸಾಹಿತಿ, ಸಂಸ್ಕೃತಿ ಚಿಂತಕ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟ ಭಾನುವಾರ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಕುರಿತ ಪ್ರೊ.ಮಾದೇವ್ ಭರಣಿ ಸಂಪಾದಿಸಿರುವ “ಸವ್ಯಸಾಚಿ” ಗೌರವಗ್ರಂಥ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ತುಮಕೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ಡಾ.ಎಚ್.ಎಂ.ಗಂಗಾಧರಯ್ಯ ಅವರದ್ದು, ತಂದೆಯ ಶಿಕ್ಷಣ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಾ ಸಹೋದರನ ಜತೆ ಬೃಹತ್ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿದ ಡಾ. ಪರಮೇಶ್ವರ ಕಾರ್ಯ ಅನನ್ಯ ಎಂದು ಹೇಳಿದರು.


ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ
ಕಟ್ಟ ಕಡೆಯ ಪ್ರಜೆಗೆ ಶಿಕ್ಷಣ ತಲುಪಿಸುವ ಮಹತ್ಕಾರ್ಯ ಮಾಡುತ್ತಿದೆ ಎಂದರು.
ಶೋಷಣೆ, ಅಸ್ಪೃಶ್ಯತೆ ನೋವನ್ನುಂಡವರು ಸದಾ ಸಮಾನತೆಗೆ ದುಡಿಯುತ್ತಾರೆ ಎನ್ನುವುದಕ್ಕೆ ಡಾ. ಪರಮೇಶ್ವರ ಅವರು ಉದಾಹರಣೆ ಎಂದು ಶ್ಲಾಘಿಸಿದರು.
ಸವ್ಯಸಾಚಿಯ ಗೌರವ ಗ್ರಂಥದಲ್ಲಿ ಡಾ.ಎಚ್.ಎಂ.ಗಂಗಾಧರಯ್ಯನವರ ಭಾವಚಿತ್ರದ ಜತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರ ಇರುವುದು ಸಂತೋಷದ ವಿಷಯ. ಸುಮಾರು ೧೧ಸಾವಿರ ಶಾಲೆಗಳನ್ನು ನಡೆಸಿ ಹಲವರಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಿರುವುದೇ ದಿಕ್ಸೂಚಿ. ಕುರ್ಚಿಯಲ್ಲಿ ಕೂರುವವರು ಎತ್ತರದ ವ್ಯಕ್ತಿತ್ವವನ್ನು ಹೊಂದಿದ್ದರೆ ಪ್ರಜಾಸತ್ತಾತ್ಮಕ ಮೌಲ್ಯಗಳು ಕುಂಠಿತವಾಗುವುದಿಲ್ಲ ಎಂದರು.
ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ಮಾತನಾಡಿ, ಡಾ. ಪರಮೇಶ್ವರ್ ತಮ್ಮ ಶಾಲೆಯ ಹಳೆ ವಿದ್ಯಾರ್ಥಿ ಎನ್ನುವುದು ಹೆಮ್ಮೆಯ ವಿಚಾರ. ತಮ್ಮ ಐವರು ಸಹೋದರರಲ್ಲಿ ನಾಲ್ವರು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಇವರಲ್ಲಿ ಮೂವರು ರಾಮಕೃಷ್ಣ ಆಶ್ರಮದಲ್ಲಿ ಕೈಂಕರ್ಯ ಮಾಡುತ್ತಿದ್ದಾರೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆ ರಾಮಕೃಷ್ಣ ಆಶ್ರಮಕ್ಕೆ ನೀಡಿದ ಕೊಡುಗೆಯಾಗಿದೆ ಎಂದು ಡಾ.ಜಿ.ಪರಮೇಶ್ವರ ಅವರಿಗೆ ಅಭಿನಂದನೆ ಸಲ್ಲಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪದ್ಮಶ್ರೀ ಡಾ.ಚಂದ್ರಶೇಖರ ಕಂಬಾರ ಅವರು ‘ಸವ್ಯಸಾಚಿ’ ಗೌರವಗ್ರಂಥವನ್ನು ಬಿಡುಗಡೆ ಮಾಡಿದರು.


ಇಂಡೋ ಶ್ರೀಲಂಕಾ ಇಂಟರ್ ನ್ಯಾಷನಲ್ ಬುದ್ದಿಸ್ಟ್ ಅಸೋಸಿಯೇಷನ್, ಹೈಪ್ರೀಸ್ಟ್ ಜಂಬೂದ್ವೀಪ, ಶ್ರೀಲಂಕಾ ಬುದ್ದಿಸ್ಟ್ಟೆಂಪಲ್, ಸಮಥ್, ವಾರಣಾಸಿಯ ಅಧ್ಯಕ್ಷರಾದ ಡಾ.ಕೆ.ಸಿರಿ ಸುಮೇಧಾಥೇರಾ, ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಕನ್ನಿಕಾ ಪರಮೇಶ್ವರಿ, ಡಾ.ಅನಂದ್, ಸಾಹೇ ಉಪಕುಲಪತಿ ಬಾಲಕೃಷ್ಣ ಶೆಟ್ಟಿ, ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಸುಶೀಲ್ ಮಹಾಪತ್ರ, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಕುಡ್ವ ನೆಲಮಂಗಲದ ಬೇಗೂರುನಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನೆ ಕೇಂದ್ರದ ಪ್ರಾಂಶುಪಾಲ ಶ್ರೀನಿವಾಸ ಸೇರಿದಂತೆ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಎಲ್ಲಾ ಕಾಲೇಜಿನ ಪ್ರಾಂಶುಪಾಲರು, ಮುಖ್ಯಸ್ಥರು, ಭೋದಕ ಮತ್ತು ಭೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಆಸನ ಮತ್ತು ಊಟದ ವ್ಯವಸ್ಥೆ: ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟ ಆಯೋಜಿಸಿದ ಕಾರ್ಯಕ್ರಮದಲ್ಲಿ ನೌಕರರು ಮತ್ತು ಸಾರ್ವಜನಿಕರು ಭಾಗವಹಿಸಲು ಒಟ್ಟು ೫ಸಾವಿರ ಆಸನ ವ್ಯವಸ್ಥೆ ಮಾಡಲಾಗಿತ್ತು. ಒಕ್ಕೂಟದ ನೌಕರರು ಮತ್ತು ಅವರ ಕುಟುಂಬದವರು, ರಾಜಕೀಯ ಧುರೀಣರು, ಬೇರೆ ಬೇರೆ ಸ್ಥಳಗಳಿಂದ ಆಗಮಿಸಿದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರು, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಎಲ್ಲಾ ಕಾಲೇಜಿನ ಪ್ರಾಂಶುಪಾಲರು, ಮುಖ್ಯಸ್ಥರು, ಭೋದಕ ಮತ್ತು ಭೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಾತ್ಯಾತೀತವಾಗಿ ಯಾವುದೇ ಪಕ್ಷ ಬೇಧವಿಲ್ಲದೇ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತು.

ಗಣ್ಯರು ಹಾಜರು:
ಮಾಜಿ ಸಚಿವರಾದ ಸೊಗಡು ಶಿವಣ್ಣ, ಟಿ.ಬಿ.ಜಯಚಂದ್ರ, ಶಾಸಕರಾದ ಷಡಕ್ಷರಿ, ರಂಗನಾಥ್, ಹುಲಿನಾಯ್ಕರ್, ಎಂ.ಟಿ. ಕೃಷ್ಣಪ್ಪ, ಮಲ್ಲಾಜಮ್ಮ, ಬಲೀಜಿತ್ ಸಿಂಗ್ ಮತ್ತು ಕುಟುಂಬ, ನಿವೇದಿತಾ ಆಳ್ವ, ನಿಂಗಪ್ಪ, ಸೋಮಶೇಖರ್, ಲೊಕೇಶ್ವರ, ಲಕ್ಷಣದಾಸ್, ಹಿರಿಯ ಪತ್ರಕರ್ತ ನಾಗಣ್ಣ, ಡಾ.ವೈ, ಎಂರೆಡ್ಡಿ ಸೇರಿದಂತೆ ಹಲವಾರು ರಾಜಕೀಯ ಮುಖಂಡರುಗಳು, ಗಣ್ಯರು ಮತ್ತು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಗ್ರಂಥಕುರಿತು: ಪ್ರೊ.ಮಾದೇವ್ ಭರಣಿ ಸಂಪಾದಿತ “ಸವ್ಯಸಾಚಿ” ಗೌರವಗ್ರಂಥದಲ್ಲಿ ಡಾ.ಜಿ.ಪರಮೇಶ್ವರ ಅವರನ್ನು ಹತ್ತಿರದಿಂದ ನೋಡಿದ ಸಾಮಾಜಿಕ ಹೋರಾಟಗಾರರು, ರಾಜ್ಯದ ಉದ್ದಗಲಕ್ಕು ಇರುವ ಪತ್ರಕರ್ತರು, ಅಧಿಕಾರಿಗಳು, ಶಾಸಕರು, ಸಂಸದರು, ಸಚಿವರು, ಕಲಾವಿದರು, ಸಾಹಿತಿಗಳು ಸೇರಿದಂತೆ ರಾಜಕೀಯವಾಗಿ, ಶೈಕ್ಷಣಿಕವಾಗಿ ಎಲ್ಲಾ ಆಯಾಮದಲ್ಲಿ ನೋಡಿದ ಹಲವಾರು ಗಣ್ಯರು ಜಾತ್ಯಾತೀತವಾಗಿ ಪಕ್ಷಾತೀತವಾಗಿ ಲೇಖನಗಳು ಗ್ರಂಥದಲ್ಲಿ ಒಳಗೊಂಡಿದೆ.
ಗೀತ ಗಾಯನದ ವೈಭವ: ಕಾರ್ಯಕ್ರಮಕ್ಕೆ ಮುನ್ನ
ನೆರೆದಿದ್ದ ಜನಸಾಗರಕ್ಕೆ ಖ್ಯಾತ ಗಾಯಕಿ ಸಂಗೀತ ಕಟ್ಟಿ ಅವರ ಸಂಗೀತದ ನಾದ ಸುಧೆ ಎಲ್ಲರ ಕಿವಿ ಇಂಪಾಗಿಸಿತ್ತು. ಚಪ್ಪಾಳೆ ಸುರಿಮಳೆಯಿಂದ ಬಿಸಿಲ ಧಗೆ ತಣ್ಣಾಗಾಗಿತ್ತು. ಸುಮಾರು ಮೂರು ಗಂಟೆಗಳ ಕಾಲ ಗಾನ ಸುಧೆ ಗಾಯನ ಎಲ್ಲರ ಮೆಚ್ಚುಗೆ ಗಳಿಸಿತು..
೧೦೧ ಪೂರ್ಣಕುಂಭದ ಸ್ವಾಗತ:
ಡಾ. ಜಿ. ಪರಮೇಶ್ವರ ಮತ್ತು ಶ್ರೀಮತಿ ಕನ್ನಿಕಾ ಪರಮೇಶ್ವರ ದಂಪತಿ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಾ. ಚಂದ್ರಶೇಖರ ಕಂಬಾರ, ಡಾ. ಬರಗೂರು ರಾಮಚಂದ್ರಪ್ಪ, ಅತಿಥಿಗಳನ್ನು ನಾದಸ್ವರದೊಂದಿಗೆ ೧೦೧ ಪೂರ್ಣಕುಂಭ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಶ್ರೀ ಸಿದ್ಧಾರ್ಥ ನಗರದ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಬುದ್ಧಗೀತೆಯನ್ನು ಹಾಡಿದರು. ಡಾ.ಜಿ.ಪರಮೇಶ್ವರ ದಂಪತಿ ಕಾರ್ಯಕ್ರಮಕ್ಕೂ ಮುನ್ನ ಅವರ ತಂದೆ-ತಾಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ವೇದಿಕೆ ಹತ್ತಿದ್ದು, ಗಮನ ಸೆಳೆಯಿತು
ಅಶೀರ್ವಚನ: ಶ್ರೀಲಂಕ, ಮಹಾರಾಷ್ಟ್ರ ಸೇರಿದಂತೆ ದೇಶದ ೧೫ಕ್ಕೂ ಬೌದ್ಧಭಿಕ್ಕುಗಳಿಂದ ಡಾ.ಜಿ.ಪರಮೇಶ್ವ ದಂಪತಿಗೆ ಆಶೀರ್ವದಿಸಿದರು.
*****