ಕೊಪ್ಪಳ, ಏ. 11: ನಗರದ ಸೃಜನಶೀಲ ಛಾಯಾಗ್ರಾಹಕ ಪ್ರಕಾಶ್ ಕಂದಕೂರು ಅವರ ಛಾಯಾಚಿತ್ರಕ್ಕೆ ಇಂಟರ್ ನ್ಯಾಷನಲ್ ಸೆಂಟರ್ ಆಫ್ ಫೋಟೋಗ್ರಫಿ ಎಕ್ಸಲೆನ್ಸ್ ನ ಚಿನ್ನದ ಪದಕ (ಐಸಿಪಿಇ) ದೊರಕಿದೆ.
ಏಷಿಯಾ ಸೂಪರ್12 ಸಕ್ರ್ಯೂಟ್ಸ್ ಭಾಗವಾಗಿ ಮಲೇಶಿಯಾದಲ್ಲಿ ನಡೆದ ಎವರ್ ಗ್ರೀನ್ ಇಂಟರ್ ನ್ಯಾಶನಲ್ ಫೋಟೋಗ್ರಫಿ ಸಕ್ರ್ಯೂಟ್-2022 ರಲ್ಲಿ ಗವಿಮಠದ ಶ್ರೀ ಗವಿಸಿದ್ಧೇಶ್ವರ ರಥೋತ್ಸವ ಸಂದರ್ಭದಲ್ಲಿ ಸೆರೆಹಿಡಿಯಲಾಗಿದ್ದ ಚಿತ್ರಕ್ಕೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
ಇಂಟರ್ ನ್ಯಾಷನಲ್ ಸೆಂಟರ್ ಆಫ್ ಫೋಟೋಗ್ರಫಿ ಎಕ್ಸಲೆನ್ಸ್, ಏಷಿಯಾ ಫೋಟೋಗ್ರಾಫರ್ಸ್ ಯೂನಿಯನ್, ಅಸೋಸಿಯೇಷನ್ ಆಫ್ ಫೋಟೋಗ್ರಾಫಿಕ್ ಆರ್ಟಿಸ್ಟ್ಸ್, ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ, ಫೋಟೋಗ್ರಫಿಕ್ ಸೊಸೈಟಿ ಆಫ್ ಅಮೆರಿಕಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈ ಸ್ಪರ್ಧೆ ನಡೆದಿತ್ತು.
ಸ್ಪರ್ಧೆಯ ಫೊಟೋಟ್ರಾವೆಲ್ ವಿಭಾಗದಲ್ಲಿ ಒಟ್ಟು ಮೂರು ಚಿನ್ನದ ಪದಕಗಳು ಬಂದಿದ್ದು ಅದರಲ್ಲಿ ಗವಿಮಠದ ಜಾತ್ರೆ ಚಿತ್ರವೂ ಒಂದು. ಕೌಲಾಲಂಪೂರದಲ್ಲಿರುವ ಫೋಟೋಗ್ರಫಿಕ್ ಸೊಸೈಟಿ ಆಫ್ ಮಲೇಶಿಯಾದ ಕೇಂದ್ರ ಕಛೇರಿಯ ಸಭಾಂಗಣದಲ್ಲಿ ಏ.20 ರಂದು ಬಹುಮಾನ ವಿತರಣೆ ಹಾಗೂ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.
ಅಭಿನಂದನೆ: ಹಿರಿಯ ಖ್ಯಾತ ಪತ್ರಕರ್ತ ಹಾಗೂ ಸಂಸ್ಕೃತಿ ಚಿಂತಕ ನಾಗೇಶ ಹೆಗಡೆ, ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ ಸಿ.ಮಂಜುನಾಥ್, ಹೆಸರಾಂತ ಛಾಯಾಗ್ರಾಹಕ ಶಿವಶಂಕರ್ ಬಣಗಾರ್ ಸೇರಿದಂತೆ ಹಲವು ಗಣ್ಯರು ಪ್ರಕಾಶ್ ಕಂದಕೂರ ಅವರನ್ನು ಅಭಿನಂದಿಸಿದ್ದಾರೆ.
*****