ವಿ ಎಸ್ ಕೆಯು ಘಟಿಕೋತ್ಸವ: ಗುಣಮಟ್ಟದ ಶಿಕ್ಷಣ,ಬಲವಾದ ನೈತಿಕ ಮೌಲ್ಯಗಳಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬಳ್ಳಾರಿ,ಏ.12: ಗುಣಮಟ್ಟದ ಶಿಕ್ಷಣ ಮತ್ತು ಬಲವಾದ ನೈತಿಕ ಮೌಲ್ಯಗಳಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರ್‍ಚಂದ್ ಗೆಹ್ಲೋಟ್ ಅವರು ಹೇಳಿದರು.
ಬಳ್ಳಾರಿಯ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಆವರಣದಲ್ಲಿ ಮಂಗಳವಾರ ನಡೆದ 9ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ವಿಶ್ವವಿದ್ಯಾನಿಲಯದಿಂದ ಪಡೆದ ಗುಣಮಟ್ಟದ ಶಿಕ್ಷಣ ಮತ್ತು ಬಲವಾದ ನೈತಿಕ ಅಡಿಪಾಯವು ನಿಮ್ಮ ವೃತ್ತಿಜೀವನವನ್ನು ಯಶಸ್ವಿಯಾಗಿಸುತ್ತದೆ ಮತ್ತು ಜೀವನದ ಹಾದಿಯಲ್ಲಿ ಮುನ್ನಡೆಯಲು ನಿಮಗೆ ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


ನಮ್ಮ ದೇಶವು ಅಭಿವೃದ್ಧಿಯ ಪಥದಲ್ಲಿದೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ಸಂಪರ್ಕಿಸುವ ಮೂಲಕ ನವ ಭಾರತವನ್ನು ಮಾಡಲು ಬದ್ಧರಾಗಿದ್ದಾರೆ ಎಂದರು.
ಉತ್ತಮ ಶಿಕ್ಷಣವು ಮನಸ್ಸು, ದೇಹ ಮತ್ತು ಆತ್ಮದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ನಂಬಿದ್ದರು. ನೀವು ನುರಿತ ವಿಜ್ಞಾನಿ, ವ್ಯವಸ್ಥಾಪಕ ಅಥವಾ ಬರಹಗಾರರಾಗಿರಬಹುದು ಆದರೆ ನಿಮ್ಮ ಶಿಕ್ಷಣವು ಮಾನವೀಯತೆಯ ಕಲ್ಯಾಣಕ್ಕಾಗಿ ಬಳಸಿದಾಗ ಮಾತ್ರ ಉಪಯುಕ್ತ ಮತ್ತು ಪ್ರಸ್ತುತವಾಗಿರುತ್ತದೆ ಎಂದು ಅವರು ಹೇಳಿದರು.
ಇಂದು ಇಡೀ ಜಗತ್ತು ವಿವಿಧ ಸವಾಲುಗಳನ್ನು ಎದುರಿಸುತ್ತಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯು ಪ್ರಾಚೀನ ಕಾಲದಿಂದಲೂ “ವಸುಧೈವ ಕುಟುಂಬಕಂ” ತತ್ವಶಾಸ್ತ್ರ್ರದ ಮೇಲೆ ಕೇಂದ್ರೀಕರಿಸಿದೆ; ಆದ್ದರಿಂದ ಆಧುನಿಕ ಜ್ಞಾನ, ಮೌಲ್ಯಗಳನ್ನು ಸೇರಿಸುವ ಮೂಲಕ ಇಂತಹ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ನೈತಿಕ ಕರ್ತವ್ಯವಾಗಿದೆ ಎಂದು ಹೇಳಿದ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ಇದು ಜಗತ್ತಿಗೆ ಹೊಸ ದಿಕ್ಕನ್ನು ನೀಡುವುದಲ್ಲದೆ ಇಡೀ ಮಾನವಕುಲಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದರು.


ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯ ಸಂಸ್ಥೆಗಳಲ್ಲಿ ತಮ್ಮ ಅರ್ಹತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂಬ ವಿಚಾರ ಹರ್ಷದಾಯಕವಾಗಿದೆ ಎಂದು ವಿವರಿಸಿದ ಅವರು ಪದವಿಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದಿಸಿದ ರಾಜ್ಯಪಾಲರು, ಘಟಿಕೋತ್ಸವವು ಪದವಿಯನ್ನು ಪಡೆಯುವ ಮೂಲಕ ಔಪಚಾರಿಕ ಶಿಕ್ಷಣವನ್ನು ಪೂರ್ಣಗೊಳಿಸುವುದನ್ನು ಗುರುತಿಸುತ್ತದೆ, ಆದರೆ ಇದು ಜೀವನದ ಮುಂದಿನ ಹಂತದ ಆರಂಭವನ್ನು ಸಹ ಸೂಚಿಸುತ್ತದೆ ಎಂದು ಹೇಳಿದರು.
ಸವಾಲುಗಳನ್ನು ಅವಕಾಶಗಳಾಗಿ ಬಳಸಿ: ಉನ್ನತ ಶಿಕ್ಷಣದ ಜಗತ್ತು ಕಳೆದ ಎರಡು ದಶಕಗಳಿಂದ ಜಗತ್ತಿನಾದ್ಯಂತ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ವಿ.ಎಸ್.ಕೆ. ವಿವಿಯು ಹಿಂದೆಂದಿಗಿಂತಲೂ ಹೆಚ್ಚು ಸದೃಢವಾಗುವುದರ ಮೂಲಕ ಸವಾಲುಗಳನ್ನು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಕುರುಕ್ಷೇತ್ರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೈಲಾಶ್‍ಚಂದ್ರ ಶರ್ಮ ಅವರು ಹೇಳಿದರು.


ಘಟಿಕೋತ್ಸವ ಭಾಷಣ ಮಾಡಿದ ಅವರು ಸಹಯೋಗದ ಕಲಿಕೆ ಮತ್ತು ಅಂತರಶಿಸ್ತೀಯ ಅಧ್ಯಯನಗಳತ್ತ ಹೆಜ್ಜೆಗಳು ತೀವ್ರವಾದ ಸವಾಲುಗಳನ್ನು ಒಡ್ಡಿವೆ, ಆದಾಗ್ಯೂ ಉತ್ಕøಷ್ಟ ಅವಕಾಶಗಳಿವೆ ಎಂಬುದನ್ನು ಮರೆಯುವಂತಿಲ್ಲ ಎಂದು ಹೇಳಿದ ಅವರು ವಿಎಸ್‍ಕೆ ವಿವಿಯು ಕಾಲಕ್ಕನುಗುಣವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಚುರುಕುಗೊಳಿಸಿ,ಉದ್ಯಮಶೀಲತೆ,ಸಂಶೋಧನೆಗಳ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸ್ಥಳೀಯ ಕೌಶಲ್ಯಗಳನ್ನು ಪ್ರಚುರಪಡಿಸಿ ಪ್ರಧಾನಮಂತ್ರಿಗಳ ಆಶಯದಂತೆ ಆತ್ಮನಿರ್ಭರ್ ಭಾರತವನ್ನು ಸ್ಥಾಪಿಸುವ ಹಾದಿಯಲ್ಲಿದೆ. ನೂತನ ಶಿಕ್ಷಣ ನೀತಿಯ ಎಲ್ಲ ಉಳಿದ ಸಲಹೆಗಳನ್ನು ಸಹ ಪರಚಯಿಸಿದರೇ ಮತ್ತು ವಿವಿಯ ವ್ಯವಸ್ಥೆಯ ರಚನೆಯಲ್ಲಿ ಅಳವಡಿಸಿದರೇ ಉತ್ತಮವಾಗಿದ್ದು,ಇವುಗಳೆಲ್ಲವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಘಟಿಕೋತ್ಸವದಲ್ಲಿ ಸ್ವಾಗತ ಭಾಷಣ ಮಾಡಿದ ವಿವಿ ಕುಲಪತಿ ಪ್ರೊ. ಸಿದ್ದು ಪಿ ಅಲಗೂರ ಅವರು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ‌ಜಿಲ್ಲೆಗಳ ಅರವತ್ತು ಸಾವಿರ ವಿದ್ಯಾರ್ಥಿಗಳು ವಿವಿಯಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಎನ್.ತಿಪ್ಪಣ್ಣ, ನರೇಂದ್ರಕುಮಾರ ಬಲ್ದೋಟ ಅವರಿಗೆ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು.
ಗೌರವ ಡಾಕ್ಟರೇಟ್‍ಗೆ ಆಯ್ಕೆಯಾಗಿದ್ದ ಹಿರೇಮಗಳೂರು ಕಣ್ಣನ್ ಅವರು ಗೈರುಹಾಜರಾಗಿದ್ದರು.
ಈ ಬಾರಿಯ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 51 ಚಿನ್ನದ ಪದಕಗಳ ಪೈಕಿ ಒಟ್ಟು 42 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ವಿತರಣೆ ಮಾಡಲಾಯಿತು. ವಿವಿಧ ವಿಭಾಗಗಳ ಒಟ್ಟು 26 ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಎಲ್ಲ ವಿಭಾಗಗಳ ಸ್ನಾತಕ ಪದವಿಯ 61 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 57 ಒಟ್ಟು 118 ವಿದ್ಯಾರ್ಥಿಗಳಿಗೆ ರ್ಯಾಂಕ್ ಪ್ರಮಾಣ ಪತ್ರಗಳನ್ನು ಈ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು.
ವಿಎಸ್‍ಕೆ ವಿವಿಯ ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ಸುಪ್ರಿಯ, ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಖನಿಜ ಸಂಸ್ಕರಣ ವಿಭಾಗದ ಉಸ್ಥಲಮುರಿ ಸುರೇಂದ್ರ, ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಶ್ರೀನಾಗ್.ಎ.ಜಿ. 03 ಚಿನ್ನದ ಪದಕ ಮತ್ತು ಪದವಿ ಪ್ರಮಾಣ ಪತ್ರಗಳು, ವಿಶ್ರೀಕೃ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ರೇಣುಕಾ.ಯು, ರಸಾಯನಶಾಸ್ತ್ರ ವಿಭಾಗದ ಅರ್ಚನ ಕೆ.ಎಮ್, ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಸಮಾಜಕಾರ್ಯ ವಿಭಾಗದ ಪ್ರಸನ್ನ ಕುಮಾರ್.ಎ ಇವರುಗಳಿಗೆ 02 ಚಿನ್ನದ ಪದಕ ಮತ್ತು ಪದವಿ ಪ್ರಮಾಣ ಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಘಟಿಕೋತ್ಸವದಲ್ಲಿ ಕುಲಸಚಿವರಾದ ಪ್ರೊ. ಎಸ್.ಸಿ.ಪಾಟೀಲ್, ಪ್ರೊ. ರಮೇಶ್ ಓಲೇಕಾರ ಸೇರಿದಂತೆ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು, ಎಲ್ಲ ನಿಕಾಯದ ಡೀನರು, ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು,ಶಾಸಕರಾದ ಸೋಮಶೇಖರರೆಡ್ಡಿ,ಅಲ್ಲಂ ವೀರಭದ್ರಪ್ಪ ಮತ್ತಿತರರು ಇದ್ದರು.
*****