ಅನುದಿನ‌ ಕವನ-೪೭೦, ಕವಿ: ರಘೋತ್ತಮ ಹೊ.ಬ, ಮೈಸೂರು, ಕವನದ ಶೀರ್ಷಿಕೆ: ಅರ್ಪಣೆ

ಅರ್ಪಣೆ

ಬಾಬಾಸಾಹೇಬರ ಜೀವನ ಚರಿತ್ರೆ ಬರೆಯಬೇಕಿದೆ
ಎಲ್ಲಿಂದ ಬರೆಯಲಿ ಹೇಗೆ ಬರೆಯಲಿ
ಯಾವ ಶೈಲಿಯ ಬಳಸಲಿ
ಯಾವ ಕಾವ್ಯದ ಮಾದರಿ ಅನುಸರಿಸಲಿ

ವಿದ್ಯೆಯ ಪರ್ವತವಾದುದ ಬರೆಯಲೇ
ವಿನಯದ ಕೀರುತಿ ಮೆರೆದುದ ಬರೆಯಲೇ
ಗಾಡಿಯಿಂದ ನೂಕಲ್ಪಟ್ಟ
ದೌರ್ಜನ್ಯದ ಧೂಳ
ದೂರದಿ ವಿದೇಶದಿ ಜಾತಿಯ ಕೆದಕಿದ
ಜಾತಿ ನಿರ್ಮೂಲನೆ ಅಮೋಘವ ಹೇಳಲೇ

ಅರೆ ಹೊಟ್ಟೆಯಲೇ
ಬಾನಷ್ಟೋದಿದ ಕತೆಯ ತಿಳಿಸಲೇ
ಸ್ವದೇಶಕೆ ಬಂದು ಬಾಡಿಗೆ ಮನೆ ದೊರೆಯದ ವ್ಯಥೆಯ ಹೇಳಲೇ
ಚೌಡರ್ ಕೆರೆಯ ನೀರ ಕುಡಿದುದ
ಕಾಳಾರಾಂ ಪ್ರವೇಶದಿ ಹಲ್ಲೆಗೊಳಗಾದುದ ವ್ಯಥೆಯ ಹೇಳಲೇ
ಹಿಂದೂವಾಗಿ ಹುಟ್ಟಿದ್ದೇನೆ ಹಿಂದೂವಾಗಿ ಸಾಯಲಾರೆ ಎಂದುದ ಹೇಳಲೆ
ಮನುಸ್ಮೃತಿ ದಹಿಸುದ ಮೆಲ್ಲನೆ ತಿಳಿಸಲೇ

ದುಂಡು ಮೇಜನು ಸದ್ದಡಗಿಸಿದ ಬರೆಯಲೇ
ಗಾಂಧಿಗು ಬೆದರದೆ ಹಕ್ಕು ತಂದುದ ಹೇಳಲೇ
ಚುನಾವಣೆಯ ಗೆದ್ದು
ಜಯ ಘೋಷಿಸಿಪ ತಿಳಿಸಲೆ
ಮಂತ್ರಿ ಮಂಡಲದಿ ಕಾರ್ಮಿಕ, ಉದ್ಯೋಗ ನೀರಾವರಿ ಮಂತ್ರಿಯಾದುದ
ರಿಸರ್ವ್ ಬ್ಯಾಂಕಿನ ಸ್ಥಾಪನೆಗೂ ಕಾರಣೀಪುರುಷನಾದುದ ಹೇಳಲೇ
ಶೂದ್ರರು ಯಾರು, ಅಸ್ಪೃಶ್ಯರು ಯಾರು ಹಿಂದೂ ಧರ್ಮದ ಒಗಟುಗಳು ಕೃತಿಗಳ ಬರೆದರು ಎನ್ನಲೇ
ಪಾಕಿಸ್ತಾನ ಭಾರತ ವಿಭಜನೆ ಕೃತಿಯಲಿ
ದೇಶ ಪ್ರೇಮವ ಮೆರೆದುದ ತಿಳಿಸಲೇ

 

ಸಂವಿಧಾನವ ಬರೆಯಲು ತೊಡಗುತ
ಸಕಲ ಜ್ಞಾನವ ಧಾರೆ ಎರೆದುದ ಅರುಹಲೇ
ಬುದ್ಧ ಘೋಷದ ಮಂತ್ರವ ಪಠಿಸುತ ಬುದ್ಧನಾದುದ ಧೈರ್ಯದಿ ಹೇಳಲೇ
ಏನ ಬರೆಯಲಿ ಎಂಥ ಬರೆಯಲಿ
ಸಕಲ ಜ್ಞಾನದ ಹಿಮಾಲಯದಡಿಯಲಿ
ಏನ ಹೇಳಲಿ ಯಾವುದ ಬಿಡಲಿ
ಕ್ಷಣ ಕ್ಷಣದ ಸಾಧಕನ ಪಾದದಡಿಯಲಿ

ನೀ ಹುಟ್ಟಿದದು ಪುಣ್ಯ
ನೀ ಮೆಟ್ಟಿದ ಭಾರತವಿದು ಧನ್ಯ
ನೀ ತೋರಿದ ಹಾದಿಯಲಿ ಮಾರ್ಗದಲಿ
ದೇಶ ಸಾಗುತಿಹುದಿಂದು
ಆದಿಗೂ ಅಂತ್ಯಕು ಸಕಲ ಕಾಲದಾಚೆಗೂ
ನಿನಗೋಲಿಪರಾರಿಲ್ಲ ಓ ಜೈಭೀಮ ಸಿಂಧು
ನಿನಗಿದೊ ಈ ಕಾವ್ಯದ ಸಮರ್ಪಣೆ
ಅರ್ಪಣೆ ಅರ್ಪಣೆ ನನ್ನ ಕಾವ್ಯದ ಸಕಲ ಕಲಾ ಶೈಲಿ ನಿನಗಿದೊ ಮಾಲಾರ್ಪಣೆ

-ರಘೋತ್ತಮ ಹೊ.ಬ, ಮೈಸೂರು
*****