ಬಾ ಮಳೆಯೇ ಬಾ
ಕಳೆದ ಸಾರಿ ಹೀ…ಗೇ…ಬಂದು
ಹಾಗೆ ಹೋದವನು
ಮತ್ತಿದೇ ಸಮಯಕ್ಕೆ ಬಂದೇ ಬರುವಿಯೆಂಬ
ಕಣ್ಣ ಕಾತರದಲ್ಲಿದೆ
ಮಳೆನಕ್ಷತ್ರದ ಚಾತಕಪಕ್ಷಿ.
ಹೊಸ್ತಿಲಲಿ ನಿಂತೇ ಕನವರಿಕೆಗಳಲಿ
ನಾನು ಹಾಡುವ ನಿನ್ನ ಹಾಡು
ಕೇಳುತ್ತಿಲ್ಲವೇ ಗೆಳೆಯಾ?
ಬತ್ತುತ್ತಿರುವ ನದಿಗಂತೂ
ನಿನ್ನದೇ ಧ್ಯಾನ, ಗೊತ್ತೇ?
ಯಾಕಾಗಿ ಈ ಕಣ್ಣಾಮುಚ್ಚಾಲೆಯಾಟ?
ಯಾರಿಗಿದೆ ಸಂತಸ?
ಗಿಡಗಂಟಿ ಪ್ರಾಣಿಸಂಕುಲ ಮತ್ತೆ….ನಾನು!
ನೋಡಬಹುದೇ ಆ ಸಂಕಟ?
ಸಾಕುಸಾಕಿನ್ನು ಧೂರ್ತಹಠ
ನಿನಗಾದರೂ ನೆಮ್ಮದಿಯೇ?
ಇಳಿದು ಬಾ ಗೆಳೆಯಾ ,ಇಳಿದು ಬಾ
ಬಾ ಮಳೆಯೇ ಬಾ
ಕರುಣೆಯಿರಲಿ ನಿನ್ನವರಲ್ಲಿ.
-ಡಾ.ಲಾವಣ್ಯ ಪ್ರಭ, ಮೈಸೂರು
*****