ಮಂಜುನಾಥ ಗೋವಿಂದವಾಡ ಅವರ ಕಲಾಕೃತಿಗಳ ಪ್ರದರ್ಶನಕ್ಕೆ‌ ಕಲಾ ಪ್ರೇಮಿಗಳಿಂದ ಮೆಚ್ಚುಗೆ

ಬಳ್ಳಾರಿ: ಸೃಜನಶೀಲ ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ಅವರ ಕಲಾ ಕೃತಿಗಳ ಪ್ರದರ್ಶನ ನಗರದ ಕಸಾಪ‌ ಭವನದ ಮೊದಲ‌ ಮಹಡಿಯ ಸಭಾಂಗಣದಲ್ಲಿ ಮುಂದುವರೆದಿದೆ.
ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಬೂಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಸೇರಿದಂತೆ ಹಲವು ಚಿತ್ರಕಲಾ ಪ್ರಿಯರು ಕಲಾ ಕೃತಿಗಳ ಪ್ರದರ್ಶನವನ್ನು ಕಣ್ತುಂಬಿ ಕೊಂಡಿದ್ದಾರೆ ಮಾತ್ರವಲ್ಲ ತಮಗೆ ಇಷ್ಟವಾದ ಕಲಾಕೃತಿಗಳನ್ನು ಖರೀದಿಸಿ ಪ್ರೋತ್ಸಾಹಿಸಿದ್ದಾರೆ.


ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ಮಂಜುನಾಥ್ ಗೋವಿಂದವಾಡ ಅವರು, ಫೆ.24 ರಿಂದ ಮಾ. 24 ರವರೆಗೆ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿತ್ರಕಲಾ ಪ್ರೇಮಿಗಳ ಒತ್ತಾಸೆಯಂತೆ ಮತ್ತೇ ಮುಂದುವರೆಸಲಾಗಿದೆ. ಪ್ರತಿದಿನ ಸಂಜೆ ಸಾಹಿತಿಗಳು, ಪ್ರಜ್ಞಾವಂತರು, ಯುವಜನ, ವಿದ್ಯಾರ್ಥಿಗಳು ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ನನಗೆ ಉತ್ತೇಜನ ನೀಡುತ್ತಿದೆ. ತಮ್ಮ ನೂತನ ಮನೆಗಳ ಗೋಡೆಗಳ ಅಲಂಕಾರಕ್ಕಾಗಿ ಹಲವರು ಬೇಡಿಕೆ ಸಲ್ಲಿಸುತ್ತಿರುವುದು ಮತ್ತಷ್ಟು ಅತ್ತುತ್ತಮ ಕಲಾಕೃತಿಗಳ ರಚನೆಗೆ ಸ್ಪೂರ್ತಿ ಯಾಗುತ್ತಿದೆ ಎಂದರು.
ಶೀಘ್ರದಲ್ಲಿ ಬೆಂಗಳೂರಿನ ಚಿತ್ರ ಕಲಾ ಪರಿಷತ್ತಿನಲ್ಲಿ ಕಲಾಕೃತಿಗಳ ಪ್ರದರ್ಶನ ಆಯೋಜಿಸುವ ಯೋಜನೆ ಇದೆ. ನಗರದ ಚಿತ್ರ ಕಲಾಪ್ರೇಮಿಗಳಿಂದ ಮತ್ತಷ್ಟು ಪ್ರೋತ್ಸಾಹವನ್ನು ನಿರೀಕ್ಷಿಸುತ್ತೇನೆ ಎಂದು ಹೇಳಿದರು.
ಸಂಜೆ ವೇಳೆ ಪ್ರಶಾಂತ ವಾತಾವರಣದಲ್ಲಿ ಲಘು ಸಂಗೀತದೊಂದಿಗೆ ಆಕರ್ಷಕ ಕಲಾಕೃತಿಗಳನ್ನು ವೀಕ್ಷಿಸುವುದೇ ಒಂದು ವಿಶೇಷ ಅನುಭೂತಿ. ಈ ಚೆಂದದ ಅನುಭೂತಿ ಪಡೆಯಲು ಮಂಜುನಾಥ ಗೋವಿಂದವಾಡ ಅವರ ಕಲಾಕೃತಿಗಳ ಪ್ರದರ್ಶನಕ್ಕೆ ಭೇಟಿಕೊಟ್ಟು ತಮಗೆ ಇಷ್ಟವಾದ ಕಲಾಕೃತಿಯನ್ನು ಖರೀದಿಸಿ ಒಯ್ಯಬಹುದು.