ನನಗೆ ದಕ್ಕಿದ್ದು ನೋವಷ್ಟೇ
ಇದಕ್ಕೆ ದೂರಲಾರೆ
ನಾನು ಯಾರನ್ನೂ
ಕೊನೆಗೆ ನನ್ನನ್ನೂ
ಸ್ವಮರುಕದ ಅಸಹ್ಯ ಸಾಲುಗಳಾಗಲಿ
ಅಥವಾ ಯಾರನ್ನೋ ದೂಷಿಸಿ
ನೋಯಿಸುವ ದ್ವೇಷವಾಗಲಿ
ನನಗೆ ಇಷ್ಟವಿಲ್ಲದ್ದು
ನಿಗೂಢ ಬದುಕಿನ ಈ ಪಥದಲ್ಲಿ
ಅವರವರ ಕಕ್ಷೆ ಅವರದು
ಅವರವರ ಕಷ್ಟ ಅವರದು
ಬಹುಷಃ ನನ್ನ ಬಯಕೆಯಂತೆ
ನನ್ನನ್ನು ಉತ್ಕಟವಾಗಿ ಪ್ರೇಮಿಸಿದ್ದು
ನೋವೊಂದೇ ಅನಿಸುತ್ತದೆ
ಆದ್ದರಿಂದ ಅದನ್ನೇ
ಅಭಿಮಾನದಿಂದ ಆಲಂಗಿಸುತ್ತೇನೆ
ಮತ್ತು ನೋವಿನ ಉದಾತ್ತ ಉನ್ಮಾದವನ್ನೇ
ಬಿಡದಂತೇ ಉಸಿರಾಡುತ್ತೇನೆ
-ಎಸ್. ಕಲಾಧರ, ಶಿಡ್ಲಘಟ್ಟ
*****