ಬಿತ್ತಿದ್ದ ಬೆಳಕೋ
ಹೆತ್ತಜ್ಜಿಯರ ಕಾಲದ ಗುಡಾಣ ಮುಟ್ಟಿ ತಟ್ಟಿಸವರಿ ತಬ್ಬಿ ಆಟವಾಡಿದ್ದೆ
ಕೂತೇ ಇತ್ತು ನಡು ಮನೆಯ ಧಡೂತಿ ಅಜ್ಜಿಯಂತೆ ಯಾವತ್ತೂ ಕೆಡು ನುಡಿಯದೆ
ತುಂಬಿಟ್ಟುಕೊಂಡಿದ್ದಳು ತಲೆಮಾರುಗಳ ತರಾವರಿ ತಳಿಗಳ
ಅನಾದಿ ಕಾಲದ ಗರ್ಭವತಿಯಂತೆ
ಇಳಿಸಿದ್ದಳು ತಾಯಿ ಅದರೊಳಗೆ
ದೇವರ ಗುಡಿಗೂ ಇರಲಿಲ್ಲ ಅಂತಹ
ದಿವ್ಯತೆ ಗಗನದ ಮಾನ್ಯತೆ
ಎದ್ದಾಡಿದವರ ಅತ್ತ ನೂಕಿ ಬಿದ್ದವರ ಬಾಯಿ ತುಂಬ ತುತ್ತ ನೀಡಿ ಗದ್ದುಗೆಯ ಗರ್ವ ಭಂಗ ಮಾಡಿ
ಗಾಳಿ ಮಾರುತಗಳ ಉಸಿರಾಡಿ ಮಿಂಚಿನ ಮೋಹ ಮಾಡಿ ಮಳೆ ಮಿಥುನದಲಿ ಬಸಿರಾಗಿ
ಬೋಳು ಬಂಜರು ಬಯಲೆಲ್ಲ ಪಯಿರು ಪಚ್ಚೆ ಮೊಳಕೆ ಬೆಳಕಾಗಿ
ಇಬ್ಬನಿಯ ಕುಡಿದು ಮಧುವಲ್ಲಿ ಮಿಡಿದು ಗಿಡಗಿಡಕು ಲಾಲಿ ಗೆಜ್ಜೆ ಗಿಲಕಿ ಕಟ್ಟಿ ತೂಗಿ ತೊನೆದು ಹೀಚು ಕಸಿಗಾಯಿ ಹಣ್ಣುಗಾಯಿ ತುಂಬಿ
ಬೆದೆಗೆ ಬಂದಂತೆ ಬಯಲೆಲ್ಲ ತುತ್ತಿನ ಸುಗ್ಗಿಯಲಿ ಹೆರಿಗೆ ಆದಂತೆ ರಾಶಿ ಕಣದಲ್ಲೆಲ್ಲ ಮಕ್ಕಳೋ ಮಕ್ಕಳು
ಸಿರಿಧಾನ್ಯ ಒಕ್ಕಲು
ಯಾರು ಹೊಡೆದುರಿಳಿಸಿದರೋ
ಹಿತ್ತಿಲ ಬೇಲಿ ಮರೆಯಲ್ಲಿ ಚೂರಾಗಿ ಮಲಗಿವೆ ಗತ ಗುಡಾಣಗಳು
ಇಷ್ಟೇ ಎಂದರೆ ಅಷ್ಟೆಯೇ
ಕೊನೆ ಉಂಟೆ ಭೂ ಗರ್ಭಕೆ
ಕಂಪನಿಯ ಬೀಜಗಳು ಉದುರಿದರೇನಂತೇ
ಅಡಗಿವೆ ಜೀವ ಜಾಲದ ಜಯ್ವಿಕ ತಳಿ ತಳಿಗಳು ತಲೆ ತಲೆಮಾರುಗಳ ಗುಡಾಣಗಳಲ್ಲಿ ಹೆತ್ತಜ್ಜಿಯರ ಬುತ್ತಿಗಳಲ್ಲಿ.
-ಡಾ. ಮೊಗಳ್ಳಿ ಗಣೇಶ್, ಹೊಸಪೇಟೆ
*****