ಅನುದಿನ ಕವನ-೪೮೩, ಕವಿ: ಹೃದಯಶಿವ, ಬೆಂಗಳೂರು

ನಿನ್ನನ್ನು ಅಗಲುವ ಹೊತ್ತು
ಒಂದೆಡೆ
ಬಿರಿದ ಭೂಮಿಯ ಬಾಯಿಗೆ
ಸೂರ್ಯನ ಕಣ್ಣೀರು ಬೀಳುತ್ತಿದ್ದರೆ
ಮತ್ತೊಂದೆಡೆ
ಧೋ ಎಂದು ಸುರಿವ
ಬಿರುಮಳೆಯ ಎದೆಯಲ್ಲಿ
ಧಗಧಗ ಬೆಂಕಿ

ಕೈಗೆ ಕೈ ತಾಕಿಸಿ ನೀ ಅಂದೊಮ್ಮೆ
ಕಡಲ ಕಿನಾರೆಯಲ್ಲಿ
ಒಂದೇ ಒಂದು ಮಾತಾಡದೆ
ಕಣ್ಣಿಗೆ ಕಣ್ಣು ಸೇರಿಸಿ ನಡೆದಾಗಿನ ನೆನಪು
ಎದೆಯ ಬಯಲಿನಲ್ಲಿ
ಪುಳಕದ ಗರಿಕೆ ಚಿಗುರಿಸಿತ್ತು,
ಇಂದೋ
ಒಡೆದ ಬದುಕಿನ ಕನ್ನಡಿಯಲ್ಲಿ
ನನ್ನದೇ ಮುಖ ನನಗೆ ಚಿಂದಿ‌ ಚಿಂದಿ

ನಾನು ತೂತು ಮಡಕೆ ಹೊತ್ತು
ಯಾತ್ರೆಗೆ ಹೊರಟ ಬಾಯಾರಿದ ಜೀವ,
ನೀನೋ
ಸೋರಿ ಹೋದ ಬದುಕಿನ ಅಮೂಲ್ಯ ದ್ರವ

ಬಿಡು, ಆಕಾಶದೆದೆಯಲ್ಲಿ
ಉರಿವ ನಕ್ಷತ್ರಗಳಂತೆ
ನೀನೂ ಉಳಿದು ಹೋದೆ
ಸೀದು ಕರಕಲಾದ
ಈ ಸುಡುಗಾಡಿನಂಥ ಹೃದಯದಲ್ಲಿ
ಒಲವ ಗುರುತಾಗಿ

ನೆನಪುಗಳು ನನ್ನ ಜೀವ ಉಳಿಸುತ್ತವೆ
ಎಂಬ
ಒಂದೇ ನಂಬಿಕೆಯೊಂದಿಗೆ
ಕಣ್ಮುಚ್ಚುತ್ತೇನೆ,
ಬೆಳಗ್ಗೆ ಹೊಸ ಸೂರ್ಯೋದಯದೊಂದಿಗೆ
ರೆಪ್ಪೆ ತೆರೆದರೆ ಪುನರ್ಜನ್ಮ,
ತೆರೆಯದಿದ್ದರೆ
ನೀನಷ್ಟೇ ಅಲ್ಲ,
ಬದುಕೇ ಒಂದು ನಿಗೂಢ ಕನಸು

-ಹೃದಯಶಿವ, ಬೆಂಗಳೂರು
*****