ಅನುದಿನ ಕವನ-೪೮೯, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಲೇಖನಿ

ಲೇಖನಿ

ಕನ್ನಡ ಸಾಹಿತ್ಯ ಸಾಗರದ ಪರಿ
ಬಣ್ಣಿಸಲಸದಳ
ಅದರ ಭವ್ಯ ವೈಭವದ ಸಿರಿ !
ಸೂರ್ಯ, ಚಂದ್ರ, ಭೂಮಿ, ಬಾನು ಹೇಗೋ
ಆದಿ – ಅಂತ್ಯವಿರದ
ಈ ಸಾಹಿತ್ಯವೂ ನಿರಂತರ
ಅಮರ
ದಿಗ್ಗಜರುಗಳಾದ
ರನ್ನ, ಜನ್ನ, ಪೊನ್ನ, ಹರಿಹರ-ರಾಘವಾಂಕ
ಕವಿವರ್ಯರು
ಸಾಹಿತ್ಯದ ಮಜಲಲ್ಲಿ
ಜಗತ್ತನ್ನೇ ಬದಲಾಯಿಸಿದರು
ಅಕ್ಕಮಹಾದೇವಿ ತನ್ನ ವಚನ ಗ್ರಂಥದಲ್ಲಿ
ಚನ್ನಮಲ್ಲಿಕಾರ್ಜುನ ಅಂಕಿತ ನಾಮದಲ್ಲಿ
ಇತಿಹಾಸವೇ ಬದಲಿಸಿದರು
ಇಂತಿರುವಾಗ
ಯಾರೋ ಕೇಳಿದರು……
ಬರವಣಿಗೆಯಿಂದ ದುಡ್ಡು ಬರುವುದೇ ?
ಅಯ್ಯೊ ಮಂಕೆ
ನಿನಗೇಕೆ ಈ ಶಂಕೆ !?
ಬರೀ ದುಡ್ಡಿಗಾಗಿ ಬದುಕುವುದಲ್ಲ
ಆತ್ಮ ತೃಪ್ತಿ, ಆತ್ಮಾಭಿಮಾನ
ಹೃದಯದೊಳಗಣ ಇರುವಾಗ
ಹೊಮ್ಮಿ ಬರುವುದು ಬರವಣಿಗೆ
ಅಕ್ಷರಗಳ ಮೆರವಣಿಗೆ !
ಮಾತಿನಲ್ಲಿ ತಿದ್ದಲಾಗದ
ಎಷ್ಟೋ ತಪ್ಪುಗಳಿಗೆ
ಲೇಖನಿಯೇ ಉತ್ತರ ನೀಡಿದೆ
ಸಮಾಜವನ್ನು ಸುಧಾರಿಸಿದೆ
ಮುಂದಿನ ಕವಿ ಪೀಳಿಗೆಗಳೆ
ಇನ್ನಾದರೂ ಎಲೆಮರೆಯ ಕಾಯಿಯಂತೆ
ಅವಿತು ಕೂರಬೇಡಿ
ಈ ಸಮಾಜದ
ಅಂಕು – ಡೊಂಕು ತಿದ್ದಲು
ಲೇಖನಿಯಷ್ಟು ಮೊನಚು
ಬೇರೊಂದಿಲ್ಲ
ಖಡ್ಗ, ಕತ್ತಿ, ಎಷ್ಟೇ ಹರಿತವಿದ್ದರೂ
ಲೇಖನಿಗೆ ಸಮವಲ್ಲ!

-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ
*****