ಕೋಟಿ ದೇವರಿಗೂ ಮಿಗಿಲು
ಬರೆಯಬೇಕಿದೆ ಕವನ ಅವ್ವನ ಬಗೆಗೆ
ಶಬ್ಧಗಳಿಲ್ಲ ನಿಘಂಟುವಿದ್ದರೆ ಕಳಿಸಿ ನನಗೆ
ನೆಲ ಮುಗಿಲನೆಲ್ಲ ಮೀರಿ ನಿಂತವಳು
ಭೂಮಿ ಭಾರವ ತಾ ಹೊತ್ತು ನಕ್ಕವಳು
ಎದೆಯಾಮೃತ ಸವಿಗೆ ಯಾವ ಹೆಸರಿಡಲಿ
ತಲೆಯ ನೇವರಿಕೆಗೆ ಏನೆಂದು ಕತೆಯಲಿ
ಮಡಿಲ ಬೆಚ್ಚನೆಗೂ ಮಿಗಿಲಿಹುದೆ ಧರೆಯಲಿ
ಮಮತೆಯ ಕೈತುತ್ತುಗಳನೆಂತು ಮರೆಯಲಿ
ಕೋಟಿ ದೇವರುಗಳಿಗೂ ಮಿಗಿಲು ಆಕೆ
ಪೂಜಿಗೆ ಗುಡಿ ಗುಂಡಾರಗಳ ಸುತ್ತಲೇಕೆ
ಸಾಟಿ ಯಾರಿಲ್ಲ ಹೋಲಿಸಲು ಅವಳ ತ್ಯಾಗಕ್ಕೆ
ಅಮ್ಮನೇ ಕಾರಣ ನಮ್ಮೆಲ್ಲರ ಭೋಗ ಭಾಗ್ಯಕ್ಕೆ
ಎಲ್ಲ ದೇವತೆಗಳಿಗೆ ಜನ್ಮವಿತ್ತವಳು ತಾಯಿ
ಮತ್ತೇಕೆ ಬಿಡಿ ಅವಳನ್ನು ಪೂಜಿಸದ ಬಾಯಿ
ವಿಶ್ವ ಅಮ್ಮಂದಿರ ದಿನಕ್ಕೆ ಒಂದು ದಿನಸಾಕೆ
ದಯಮಾಡಿ ವೃದ್ಧಾಶ್ರಮಕೆ ನೂಕದಿರಿ ಜೋಕೆ
ತೀರ್ಥಯಾತ್ರೆಗಳಿಂದ ಪುಣ್ಯ ಬರುವುದೆ ಹೇಳಿ
ಜಗಮೆಚ್ಚುವಂತೆ ಅವಳೊಡನೆ ನಗುತ ಬಾಳಿ
ಆಸ್ತಿ ಅಂತಸ್ತು ಎಂದು ಬೀಗದಿರಿ ನೀವು
ಮಾಡದಿರಿ ಆ ನಿಷ್ಕಲ್ಮಶ ಮನಸ್ಸಿಗೆ ನೋವು!
-ಕುಮಾರ ಚಲವಾದಿ, ಹಾಸನ
*****