ಸುಡುಬಿಸಿಲ ಧಗೆ ವಿರಹ ಮುಕ್ತಾಯಗೊಳ್ಳುವ
ಮುನ್ಸೂಚನೆಯಂತೆ ಹೀಗೆ ಹನಿಹನಿ ಹಜ್ಜೆಯಿಟ್ಟು
ಹತ್ತಿರವಾದಂತೆಲ್ಲಾ ನೀ ಸನಿಹ….
ಕತ್ತಲ ಸೆರಗನ್ನು ಒದ್ದೆಮುದ್ದೆಯಾಗಿಸಿದ ಉತ್ಸವಕ್ಕೆ
ಉಸಿರು ಚೆಲ್ಲಾಪಿಲ್ಲಿ ಬಲುಜೋರು ಬೀಸುಗಾಳಿ
ತೂಗುಯ್ಯಾಲೆ ಎಲೆ ಹೂವು ಗಿಡ ಬಳ್ಳಿ
ಕಿವಿಗಡಚಿಕ್ಕುವ ಗುಡುಗೋ ಸಿಡಿಲೋ?
ಏರುಪೇರಾದ ಎದೆಬಡಿತದ ಹುಯಿಲೋ…?
ಕಣ್ಣು ಕೋರೈಸಿದ ಮಿಂಚಿನಾರ್ಭಟದ
ಆ ಕ್ಷಣದ ಬೆಳಕಲ್ಲಿ ಹೊಳೆದು ಹೊಳೆಯಿಸಿದ
ರೂಪ ನಿನ್ನದೇನು?
ಹನಿಹನಿ ಮುತ್ತುಗಳ ಪೋಣಿಸಿ ತೊಡಿಸಿ
ಮಾತು ಶುರುವಿಟ್ಟುಕೊಂಡು
ಹೊಸೆದ ಸಾಲುಗಳಲ್ಲಿ ಧ್ಯಾನಿಸಿದ್ದು ಕವಿತೆಯೇನು?
ಹೇಳಿ ಈಗ …..
ಈ ದಡಕೆ ಅಲೆ ತಾಕಿ ಹೀಗೆ ಸುಖದ ಅಮಲಲ್ಲಿ
ಮನಸು ತೂಗುವಾಗ ಬೇಡವೆನ್ನಲಿ ಹೇಗೆ?
ಮಳೆಕೊಳಲ ರಾಗಕ್ಕೆ ತುಟಿ ಬೆಸೆದು
ಹೂವರಳಿಸುವ ಮಣ್ಣಗಂಧದ ಘಮಲಿಗೆ…
ಭೂಮಿ ಆಕಾಶದೊಲವಿನ ಬೆಸುಗೆಗೆ….
ಪ್ರೀತಿಯಾಗದಿದ್ದರೆ ಹೇಗೆ?
-ಲಾವಣ್ಯ ಪ್ರಭ, ಮೈಸೂರು