ಹೊಸಪೇಟೆ(ವಿಜಯನಗರ), ಮೇ 19: ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವ ರಕ್ತದಾನದಂತಹ ಮಹತ್ತರ ಕಾರ್ಯದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಬೇಕು ಎಂದು ಹೊಸಪೇಟೆಯ ಸಹಾಯಕ ಆಯುಕ್ತ ಸಿದ್ಧರಾಮೇಶ್ವರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್. ಹಾಗೂ ರೆಡ್ ಕ್ರಾಸ್ ಘಟಕಗಳು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಿಜಯನಗರ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ವಿಶ್ವ ರೆಡ್ ಕ್ರಾಸ್ ದಿನಾಚರಣೆಯ ನಿಮಿತ್ತ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ವ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಯಲ್ಲಿ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು, ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳಬೇಕು; ಈ ದಿಸೆಯಲ್ಲಿ ಹೊಸಪೇಟೆ ನಗರದ ಸಂಘ ಸಂಸ್ಥೆಗಳು ಉತ್ತಮ ಕಾರ್ಯ ಮಾಡುತ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸರಕಾರಿ ನೂರು ಹಾಸಿಗೆಯ ಆಸ್ಪತ್ರೆಯ ವೈದ್ಯ ಡಾ.ಸೋಮಶೇಖರ್ ಮಾತನಾಡಿ “೧೮ರಿಂದ ೬೦ ವರ್ಷ ಒಳಗಿನ, ಮಾನಸಿಕ, ದೈಹಿಕ ಸದೃಢ ಹೊಂದಿದ ೫೦ ಕೆ.ಜಿ. ತೂಕದ ವ್ಯಕ್ತಿಗಳು ರಕ್ತದಾನ ಮಾಡಲು ಅರ್ಹರು. ಆರೋಗ್ಯವಂತ ಮನುಷ್ಯನ ದೇಹದಲ್ಲಿ ೫ರಿಂದ ೬ಲೀಟರ್ ರಕ್ತ ಇರುತ್ತದೆ. ಇದರಲ್ಲಿ ಕೇವಲ ೩೫೦ ಮಿ.ಲೀ. ಮಾತ್ರ ರಕ್ತ ಪಡೆಯಲಾಗುವುದು. ದೇಶಾದ್ಯಂತ ಪ್ರತಿ ೨ ಸೆಕೆಂಡಿಗೆ ಒಬ್ಬರಂತೆ ರಕ್ತದ ಅವಶ್ಯಕತೆ ಇದೆ. ರಕ್ತದಾನದಿಂದ ಜೀವ ಉಳಿಸಬಹುದಾಗಿದ್ದು ಇದು ಶ್ರೇಷ್ಠ ದಾನವಾಗಿದೆ” ಎಂದು ಹೇಳಿದರು.
ಪಿಡಿಐಟಿ ಪ್ರಾಂಶುಪಾಲ ಡಾ.ಎಸ್.ಎಂ.ಶಶಿಧರ್ ಮಾತನಾಡಿ ರಕ್ತಕ್ಕೆ ಬೇರೆ ಪರ್ಯಾಯವಿಲ್ಲ. ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ. ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ. ಎಷ್ಟೇ ಕೋಟಿ ಕೊಟ್ಟರೂ ರಕ್ತ ಸೃಷ್ಟಿ ಮಾಡಲಾಗುವುದಿಲ್ಲ. ಹೀಗಾಗಿ ರಕ್ತದಾನದ ಮೂಲಕ ಮಾತ್ರ ಬೇಡಿಕೆಯನ್ನು ಪೂರೈಸಬಹುದು. ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೆ, ಮಾನವೀಯ ಸಮಾಜ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ ಅವರು ರಕ್ತ ದಾನಿ ವಿದ್ಯಾರ್ಥಿಗಳ ಕಾರ್ಯವನ್ನು ಪ್ರಶಂಸಿಸಿ ಜ್ಯೂಸ್ ವಿತರಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ರಾವ್, ಉಪಾಧ್ಯಕ್ಷ ರವಿಶಂಕರ್, ಕಾರ್ಯದರ್ಶಿ ಅನ್ನಪೂರ್ಣ ಸದಾಶಿವ, ಸದಸ್ಯರಾದ ಕೊಟ್ರಪ್ಪ, ಶಮಿತಾ, ಬಿಂದು ಮುಂತಾದವರು ಉಪಸ್ಥಿತರಿದ್ದರು.
*****