ಅನುದಿನ ಕವನ-೫೦೭, ಕವಯತ್ರಿ: ✍️ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಬೆಳಗಾವಿ, ಕವನದ ಶೀರ್ಷಿಕೆ: ಎಕ್ಕದ ಹಾಲು ಮತ್ತು ಬಳ್ಳಿ ಹೂವು

ಎಕ್ಕದ ಹಾಲು ಮತ್ತು ಬಳ್ಳಿ ಹೂವು

ನಾವು ಬದುಕು ಕಟ್ಟುವ ಆತುರದಲ್ಲಿ ದ್ದೇವೆ..
ನೀವು ಜೀವ ಸೌಧ ಕೆಡಹುವ ಧಾವಂತದಲ್ಲಿದ್ದೀರಿ.

ನಾವು ಸರಕಾರಿ ಶಾಲೆಯ ಪಾಟಿಗ್ಗಲ್ಲಿನ ಮೇಲೆ ,
ಜಗತ್ತಿನ ನಕಾಶೆ ಬಿಡಿಸುತ್ತಿದ್ದೇವೆ ..

ನೀವು ಶಹರಿನ ಶಾಲೆಗಳ ಎಸಿ ರೂಮ್ ನಲ್ಲಿ
ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದೀರಿ ..

ನಾವು ಕರಿಹಲಿಗೆಯ ಮೇಲೆ, ದೇಶದ ಲೆಕ್ಕಾಚಾರ ಬರೆಯುತ್ತಿದ್ದೇವೆ..
ನೀವು ಶಾಹಿ ತೀರಿದ ಲೇಖನಿಯಿಂದ
ಅದೇ ದೇಶದ ಚಿತ್ರಣವನ್ನೇ ಬದಲಿಸುತ್ತದ್ದಿರಿ…

ನಾವು ಆಕಾಶದ ಚುಕ್ಕಿ ನಕ್ಷತ್ರಗಳ ಎಣಿಸುತ್ತಿದ್ದೇವೆ. ಸೂರಿಲ್ಲದ ಮುರುಕು ಗುಡಿಸಲಿನ ಛಾವಣಿಯಿಂದ…

ನೀವು ಸಾವಿರ, ಲಕ್ಷ ,ಕೋಟಿ ಕೋಟಿಗಳ
ಹಾಸಿಗೆಗಳಲ್ಲಿ ಉರುಳಾಡುತ್ತ
ಹೇಸಿ ಬದುಕ ಬದುಕುತ್ತಿದ್ದೀರಿ….

ನಾವು ಪ್ರಜಾಪ್ರಭುತ್ವದ ಆಶಯಗಳನ್ನು, ವಿದ್ಯಾ ದೇಗುಲದಲ್ಲಿ ಬೋಧಿಸುವ ಕೈಂಕರ್ಯದಲ್ಲಿದ್ದೇವೆ….

ನೀವು ಅದೇ ಪ್ರಜಾಪ್ರಭುತ್ವದ
ಧೋರಣೆಗಳನ್ನು, ಹೊಸಕಿ ಹಾಕಿ
ಗಡದ್ದಾಗಿ ತಿಂದು ತೇಗಿ
ವಿಧಾನಸೌಧದಲ್ಲಿ ಮಲಗಿದ್ದೀರಿ…

ನಾವು ಹೊಟ್ಟೆ ತುಂಬಿಸಿಕೊಳ್ಳುವ
ಕಾಯಕ ಜೀವಿಗಳು, ನೇಗಿಲಯೋಗಿಗಳು….

ನೀವು ಬಿಟ್ಟಿಯಾಗಿ ತಿಂದು, ತೇಗಿ ,
ಹಂದಿಯಂತೆ ಡರಕಿ ಹೊಡೆದು ಕೊಚ್ಚಿಗಳಲ್ಲಿ ಉರುಳಾಡಿದರೂ ಸುವಾಸನೆ ಬೀರುತ್ತಲಿದ್ದೀರಿ …

ನಾವು ಕರಿಮೈಯ ಕೂಲಿಗಳು,
ಬೆವರು ರಕ್ತಗಳೆರಡಕ್ಕೂ ಬೆಲೆತೆತ್ತವರು….

ನೀವು ಬೆವರು ಹರಿಸಲು ಜಿಮ್ ಗೆ ಹೋಗುವ
ಥಳಕು ಬೆಳಕಿನ ಶೋಕಿಲಾಲರು….

ನಾವು ಪ್ರೇಮಸೌಧಕ್ಕೆ ಅಡಿಪಾಯ ಹಾಕಿದ್ದೇವೆ.. ನೀವು ಸೌಹಾರ್ದದ ಭೂಮಿಗೆ ವಿಷ ಬೀಜ ಬಿತ್ತುತ್ತಲಿದ್ದೀರಿ…

ನಾವು ಹಸಿದ ಹೊಟ್ಟೆ, ಆಕಾಶದ ಸೂರು,
ಬರಿಮೈ ಬಟ್ಟೆಯ ಮಾನವರು

ನೀವು ಖಾಕಿ ಕೈದಿಗಳು, ಖಾದಿ ಖದೀಮರು, ಮಾನವಂತರು…

ನೀವು ನಂಜೇರಿದ ನಾಲಿಗೆಯಿಂದ,
ತುತ್ತೆಯ ತುತ್ತು ತಿನ್ನಿಸುವ,
ಮುಳ್ಳಬೇಲಿಯ ಕಳ್ಳಿಹಾಲ್ಗಿಡಗಳು…

ನಾವು ಎದೆಯ ತುಂಬೆಲ್ಲಾ
ಸಾವಿರದ ಕನಸ ಕಸೂತಿ ಹಾಕಿ,
ಕೌದಿ ಹೊಲೆಯುವ ಕರಳು ಬಳ್ಳಿಯ ಹೂಗಳು…..


✍️ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
*****